Belagavi

ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ : ಎ.ಸಿ.ಪಿ. ಬಾಳಪ್ಪ ಮಂಟೂರ

Share

ಅಪರಾಧ ಮುಕ್ತ ಸಮಾಜದ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಕರ್ತವ್ಯ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಎಚ್ಚರಿಕೆಯೇ ಮೊದಲ ರಕ್ಷಣೆ. ನಾವು ಜಾಗೃತರಾಗಿದ್ದಾಗ ಮಾತ್ರ ಸೈಬರ್ ಸುರಕ್ಷತೆ ಹಾಗೂ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಳಗಾವಿ ನಗರ ಸೈಬರ್ ಪೊಲೀಸ್ ಠಾಣೆಯ ಎಸಿಪಿ ಬಾಳಪ್ಪ ಮಂಟೂರ ಅಭಿಪ್ರಾಯಪಟ್ಟರು.

ಅವರು ಇಂದು ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಅಗಮ್ಯ ಸೈಬರ್ ಟೆಕ್, ಸ್ಟೀಮ್. ಎಚ್. ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನ, ಎಸ್‌.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕಾಲೇಜಿನ ಸೈಬರ್ ಸುರಕ್ಷತೆಯ ಸಿಒಇ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅಗಮ್ಯ ಸೈಬರ್ ಟೆಕ್” ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಸೈಬರ್ ಅಪರಾಧಿಗಳು ಸಮಾಜದಲ್ಲಿನ ಮುಗ್ಧ ಜನರ ಖಾತೆಯಲ್ಲಿರುವ ಹಣ ದೋಚುವುದಲ್ಲದೆ ಅವರ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುವು ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅವಮಾನಕ್ಕೀಡು ಮಾಡುತ್ತಾರೆ. ಇದರಿಂದ ಅವಮಾನಗೊಂಡು ಅನೇಕ ಮುಗ್ಧ ಜನ ತಮ್ಮ ಜೀವ ಕಳೆದುಕೊಳ್ಳುತ್ತಾರೆ. ಕಾರಣ ಇಂತಹ ವಂಚಕರ ಸುಳಿವು ಪಡೆದು ಡಿಜಿಟಲ್ ಸಾಕ್ಷಿ ಸಂಗ್ರಹಿಸಿ, ಅವರನ್ನು ಕೋರ್ಟ್ ಗಳಿಗೆ ಹಾಜರುಪಡಿಸುವುದರ ಮೂಲಕ ಸೈಬರ್ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡೆಲ್ಟಾ ಎಕ್ಸ್ಚೇಂಜ್ ಗ್ರೂಪ್ ನ ಸುರಕ್ಷತಾ ಅಧಿಕಾರಿ ವೆಂಕಟೇಶ ಶರ್ಮಾ ಮಾತನಾಡಿ ಸೈಬರ್ ಅಪರಾಧ ಇಂದು ಕೇವಲ ಪ್ರತಿಷ್ಠಿತ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅದು ಪ್ರತಿಯೊಬ್ಬರನ್ನೂ ಗುರಿಯನ್ನಾಗಿಸಿದೆ‌. ಸೈಬರ್ ಸುರಕ್ಷತೆ ಜ್ಞಾನಪಡೆಯುವುದು ಪ್ರಸ್ತುತ ಆಯ್ಕೆ ಅಲ್ಲ ಬದಲಿಗೆ ಅದು ಕಡ್ಡಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಗಿರೀಶ ಬಡಿಗೇರ ಮಾತನಾಡಿ ಸಮಾಜ ಅಪರಾಧ ಮುಕ್ತವಾಗಬೇಕಾದರೆ ಜನರು ಕೌಶಲ್ಯಯುಕ್ತರಾಗಬೇಕು. ತಂತ್ರಜ್ಞಾನ ಬೆಳದಂತೆ ಹೊಸ ಹೊಸ ರೀತಿಯಲ್ಲಿ ವಂಚಕರು ಹುಟ್ಟಿಕೊಳ್ಳುತ್ತಿದ್ದಾರೆ. ಇವುಗಳನ್ನು ಮೆಟ್ಟಿ ನಿಲ್ಲುವ ಕೌಶಲ ನಮ್ಮಲ್ಲಿರಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಮಾತನಾಡಿ ಪ್ರಸ್ತುತ ಸುಶಿಕ್ಷಿತರೇ ಹೆಚ್ಚು ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಯುವಕರು ಇಂಟರ್ನೆಟ್, ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳು ಮತ್ತು ಡಿಜಿಟಲ್ ಡೇಟಾ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ವೇದಿಕೆ ಮೇಲೆ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಆರ್. ಪಟಗುಂದಿ, ಅಗಮ್ಯ ಸೈಬರ್ ಟೆಕ್ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವಸ್ತ್ರದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕಾಲೇಜಿನ ಸೈಬರ್ ಸುರಕ್ಷತೆಯ ಸಂಯೋಜಕಿ ಡಾ. ಅನಿತಾ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಸುಪ್ರಿತಾ ಹೆಗಡೆ ಹಾಗು ಪ್ರಿಯಾ ಬಿರಾದರ ನಿರೂಪಿಸಿದರು. ಕೊನೆಗೆ ಅಗಮ್ಯ ಟೆಕ್ ಸಹ ಸಂಸ್ಥಾಪಕ ಅಕ್ಷಯ ನಾಯಕ ವಂದಿಸಿದರು.

Tags:

error: Content is protected !!