ನಮಸ್ಕಾರ, ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಲ್ಲೋಳಿ ಗ್ರಾಮದ ರಮೇಶ್ ಬಂಡ್ರೋಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆ. ರಾಮರಾಜನ್ ತಿಳಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲೋಳಿ ಗ್ರಾಮದಲ್ಲಿ ರಮೇಶ್ ಬಂಡ್ರೋಳಿ ಎಂಬುವವರ ಕೊಲೆಯಾಗಿದ್ದು, ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಪರಾಧ ಸಂಖ್ಯೆ 231/2026 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ರಮೇಶ್ ಬಂಡ್ರೋಳಿ ಕೆಲ ದಿನಗಳ ಹಿಂದೆ ತಮಗೂ ಹಾಗೂ ಆರೋಪಿ ಲಕ್ಷ್ಮೀ ಒಡೆಯರ್ ಇರುವ ಫೋಟೋವನ್ನು ತಮ್ಮ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಮತ್ತು ಹಳೆಯ ವೈಷಮ್ಯದಿಂದ ಲಕ್ಷ್ಮೀ ಒಡೆಯರ್ ಹಾಗೂ ಬನಪ್ಪ ಒಡೆಯರ್ ಇಬ್ಬರೂ ಸೇರಿ ರಮೇಶ್ ಅವರನ್ನು ಕಲ್ಲೋಳಿಯ ತಮ್ಮ ಮನೆಯ ಹಿಂಭಾಗಕ್ಕೆ ಕರೆಸಿ ಕೊಲೆ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವಿಷಯ ತಿಳಿದ ಕೂಡಲೇ ಘಟಪ್ರಭಾ ಪೊಲೀಸ್ ಠಾಣೆಯ ತ್ವರಿತ ಕಾರ್ಯಾಚರಣೆ ತಂಡವು ಇಬ್ಬರೂ ಪ್ರಾಥಮಿಕ ಆರೋಪಿಗಳಾದ ಲಕ್ಷ್ಮೀ ಒಡೆಯರ್ ಮತ್ತು ಬನಪ್ಪ ಒಡೆಯರ್ ಅವರನ್ನು ಯಶಸ್ವಿಯಾಗಿ ಬಂಧಿಸಿದೆ. ವಶಕ್ಕೆ ಪಡೆದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಕುರಿತು ಹೆಚ್ಚಿನ ಕಾನೂನು ಕ್ರಮಗಳು ಮುಂದುವರಿದಿವೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
