ಬೆಳಗಾವಿಯ ಜ್ಞಾನ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಫೇವೌರ್ಡ್-ಕೆ ಮಹಿಳಾ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾದ ಮಹಿಳಾ ಆರೋಗ್ಯ ಜಾಗೃತಿ ಮತ್ತು ಸಬಲೀಕರಣ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಆರೋಗ್ಯ ತಪಾಸಣೆಯೊಂದಿಗೆ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ಸರ್ಕಾರದ ಯೋಜನೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜ್ಞಾನ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಫೇವೌರ್ಡ್-ಕೆ ಬೆಳಗಾವಿ ವಿಭಾಗದ ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಆರೋಗ್ಯ ಜಾಗೃತಿ ಹಾಗೂ ಆರ್ಥಿಕ ಸಬಲೀಕರಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಸಂಸ್ಥೆಯ ಅಧ್ಯಕ್ಷೆ ಪಲ್ಲವಿ ಚೌಗುಲೆ ಮತ್ತು ಕಾರ್ಯದರ್ಶಿ ವಿಜಯಾ ನಸರಗಿ ಅವರ ನೇರ ದಿವ್ಯಸಾನ್ನಿಧ್ಯ ಹಾಗೂ ಸಾರಥ್ಯದಲ್ಲಿ ನಡೆದ ಈ ಸಮಾವೇಶದಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ಮಹಿಳೆಯರಿಗೆ ಉಚಿತವಾಗಿ ರಕ್ತದೊತ್ತಡ (BP) ಹಾಗೂ ಮಧುಮೇಹ (Sugar) ತಪಾಸಣೆ ನಡೆಸಿ, ಸೂಕ್ತ ಆರೋಗ್ಯ ಸಲಹೆಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಬಾರ್ಡ್ (NABARD) ಡಿಡಿಎಂ ಅಭಿನವ ಯಾದವ್ ಅವರು ಮಹಿಳೆಯರಿಗಾಗಿ ಇರುವ ವಿವಿಧ ಬ್ಯಾಂಕಿಂಗ್ ಯೋಜನೆಗಳು, ಸಾಲಭಾಗ್ಯಗಳು ಹಾಗೂ ಅಣಬೆ ಕೃಷಿಯ ವಾಣಿಜ್ಯೀಕರಣ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು. ಡಾ. ಭಾತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಮಿತ್ ಭಾತೆ ಅವರು ಮಹಿಳೆಯರ ಆರೋಗ್ಯದ ದೈಹಿಕ ಸಮಸ್ಯೆಗಳು, ಮುನ್ನೆಚ್ಚರಿಕೆ ಕ್ರಮಗಳು ಮತ್ತು ತೆಗೆದುಕೊಳ್ಳಬೇಕಾದ ಔಷಧೋಪಚಾರಗಳ ಕುರಿತು ಜಾಗೃತಿ ಮೂಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯ ಮಾಜಿ ರಾಜ್ಯ ನಿರ್ದೇಶಕಿ ಲೀನಾ ಟೋಪಣ್ಣವರ ಅವರು ಮಹಿಳಾ ಸಬಲೀಕರಣ, ಕೌಶಲ್ಯ ತರಬೇತಿ, ಪ್ರಮಾಣಪತ್ರಗಳ ಮಹತ್ವ ಹಾಗೂ ವಾಣಿಜ್ಯೀಕರಣದ ಹಾದಿಯ ಕುರಿತು ಪ್ರಭಾವಿ ಉಪನ್ಯಾಸ ನೀಡಿದರು.
ಖಾದಿ ಗ್ರಾಮೋದ್ಯೋಗದ ಪ್ರಾಚಾರ್ಯ ಬಂಗಾರ ನಾಯಕ, ವಿಟಿಯು (VTU) ನಿರ್ದೇಶಕ ಡಾ. ಶಿವಾನಂದ ದಂಡಗಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಗೋಡ್ಕೆ ಸೇರಿದಂತೆ ಎಐಡಬ್ಲ್ಯೂಸಿ (AIWC) ಉಪಾಧ್ಯಕ್ಷೆ ನಾಗವೇಣಿ, ವಿಜಯಾ ಹಿರೇಮಠ, ಮನೀಷಾ ಬೆಣಕೆ, ಅಫ್ರೀನ್ ಸೈಯದ್, ಸವಿತಾ ಖೋಬರೆ, ಉಮಾ ಸೋಲಾಪುರೆ, ಜೆಬಾ ಮುಲ್ಲಾ ಹಾಗೂ ಫೇವೌರ್ಡ್-ಕೆ ಮಹಿಳಾ ವೇದಿಕೆಯ ಕೋರ್ ಕಮಿಟಿ ಸದಸ್ಯೆಯರು ಉಪಸ್ಥಿತರಿದ್ದು ಮಹಿಳಾ ಪರ ವಿಷಯಗಳ ಕುರಿತು ಸವಿವರವಾಗಿ ಮಾತನಾಡಿದರು.
