Belagavi

ಸಹೋದ್ಯೋಗಿಯನ್ನು ಇರಿದು ಕೊಂದು ಸುಳ್ಳು ಕಥೆ ಕಟ್ಟಿದ್ದ ಆರೋಪಿ ಅರೆಸ್ಟ್; ಎಸ್ಪಿ ಕೆ. ರಾಮರಾಜನ್…

Share

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದ ಕಾರ್ಮಿಕನ ಭೀಕರ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆಪಾದನೆಯನ್ನು ಮುಚ್ಚಿಹಾಕಲು ಸುಳ್ಳು ದಾಖಲೆ ಸೃಷ್ಟಿಸಲು ಯತ್ನಿಸಿದ ಕೊಲೆಗಾರನನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಅವರು ತಿಳಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ್ ಪಿಜಿ ಗ್ರಾಮದ ‘ಪ್ರಿಯಾ ಸ್ಟೀಲ್ಸ್‌’ ಫ್ಯಾಕ್ಟರಿಯಲ್ಲಿ ನಡೆದಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸತಿರಾಮ್ ಅಲಿಯಾಸ್ ಸೀತಾರಾಮ್ ಚಂದ್ರದೇವ್ ಕೊಲೆ ಪ್ರಕರಣವನ್ನು ಘಟಪ್ರಭಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆಗಸ್ಟ್ 23 ರಂದು ಕೆಲಸದ ಸ್ಥಳದಲ್ಲಿ ಒಟ್ಟಿಗೆ ಕುಡಿದು ಜಗಳವಾಡಿದ ಸಹೋದ್ಯೋಗಿ ಅರುಣ್ ಕುಮಾರ್ ಬಲಿಷ್ಟ‌ರ್ ಚೌಹಾಣ್ ಎಂಬಾತನೇ ಚಾಕುವಿನಿಂದ ಎದೆಗೆ ಇರಿದು ಸತಿರಾಮ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದನು. ಕೃತ್ಯದ ಬಳಿಕ ಮೃತದೇಹವನ್ನು ಗೋಕಾಕ್ ಆಸ್ಪತ್ರೆಗೆ ಸಾಗಿಸಿ, ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆಂದು ವೈದ್ಯರಿಗೆ ಸುಳ್ಳು ಎಂಎಲ್ಸಿ ದಾಖಲಿಸಲು ಯತ್ನಿಸಿ ಪ್ರಕರಣ ಮುಚ್ಚಿಹಾಕಲು ಆರೋಪಿ ಸಂಚು ರೂಪಿಸಿದ್ದನು.
ವಿಷಯ ತಿಳಿದ ಕೂಡಲೇ ಎಚ್ಚೆತ್ತ ಘಟಪ್ರಭಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:

error: Content is protected !!