ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಿಂದಾಗಿ ಕಳೆದ ಆರು ವರ್ಷಗಳಿಂದ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧಕ್ಕೆ ಒಳಗಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಇಂದು ಧಾರವಾಡಕ್ಕೆ ನ್ಯಾಯಾಲಯದ ಷರತ್ತಿನಂತೆ ಪ್ರವೇಶ ಮಾಡಿದರು.

ಧಾರವಾಡ ಜಿಲ್ಲೆಗೆ ಪ್ರವೇಶ ಮಾಡಿದ ವಿನಯ ಕುಲಕರ್ಣಿಯವರು ನೇರವಾಗಿ ಧಾರವಾಡದ ಶ್ರೀ ಮುರುಘಾಮಠಕ್ಕೆ ತೆರಳಿ, ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಆರು ವರ್ಷಗಳಿಂದ ಯೋಗೇಶಗೌಡ ಕೊಲೆ ಪ್ರಕರಣದಿಂದಾಗಿ ಕುಲಕರ್ಣಿಯವರಿಗೆ ನ್ಯಾಯಾಲಯವು ನಿರ್ಬಂಧ ಹೇರಿತ್ತು. ಜತೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಸೇರಿ 17 ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಹೈಕೋರ್ಟ್ನಲ್ಲಿ ಶಿಕ್ಷೆ ಪ್ರಮಾಣಕ್ಕೆ ತಡೆ ನೀಡಿ, ಜಾಮೀನು ಮಂಜೂರು ಮಾಡಿತ್ತು. ಜತೆಗೆ ಸಾಕ್ಷಿ ನಾಶ ಕೇಸಿನಲ್ಲಿ ನಿರ್ಬಂಧವು ಈಗ ತೆರವಾಗಿದೆ. ಅಲ್ಲದೆ ಯಾವುದೇ ಆಡಂಬರ, ಸಾರ್ವಜನಿಕ ಸಭೆ, ಮೆರವಣಿಗೆ ಮಾಡದಂತೆ ಕೋರ್ಟ್ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಈಗ ಸರಳವಾಗಿ ಕುಲಕರ್ಣಿಯವರು ಜಿಲ್ಲೆಗೆ ಪ್ರವೇಶ ಮಾಡಿ ಮಠದಲ್ಲಿ ಪೂಜೆ ಸಲ್ಲಿಸಿ, ಈಗ ಮನೆಗೆ ಮರಳಿದ್ದಾರೆ. ಇನ್ನು ಪತಿಗೆ ಪತ್ನಿ ಸೇರಿ ಆಪ್ತರು ಸಾಥ್ ನೀಡಿದರು.
