ಯೆಳ್ಳೂರಿನ ಗ್ರಾಮದೇವತೆ ಶ್ರೀ ಚಾಂಗಳೇಶ್ವರಿ ದೇವಿಯ ವಾರ್ಷಿಕ ಶ್ರಾವಣ ಮಾಸದ ಅಭಿಷೇಕ ಕಾರ್ಯಕ್ರಮವು ಅಪಾರ ಭಕ್ತಿ ಹಾಗೂ ಸಡಗರದಿಂದ ನೆರವೇರಿದೆ.

ಬೆಳಗಾವಿ ತಾಲೂಕಿನ ಯೆಳ್ಳೂರಿನಲ್ಲಿ ಮಂಗಳವಾರ ಅತಿ ವಿಜೃಂಭಣೆಯಿಂದ ಶ್ರೀ ಚಾಂಗಳೇಶ್ವರಿ ದೇವಿಯ ಶ್ರಾವಣ ಮಾಸದ ವಾರ್ಷಿಕ ಅಭಿಷೇಕ ಸೋಹಳ ಜರುಗಿತು. ಶ್ರೀ ಚಾಂಗಳೇಶ್ವರಿ ಅಭಿಷೇಕ ಹಾಗೂ ಯುವಕ ಮಂಡಳದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗಿನಿಂದಲೇ ಸವಾದ್ಯ ಮೇಳದೊಂದಿಗೆ ಮಹಿಳೆಯರು ಮಂಗಳ ಕಳಶ ಹೊತ್ತು ಜಲಾಭಿಷೇಕ ನೆರವೇರಿಸಿದರು.
ವಿವಿಧ ಸುಗಂಧ ದ್ರವ್ಯಗಳು ಹಾಗೂ ಪವಿತ್ರ ಜಲದಿಂದ ದೇವಿಗೆ ಅಭಿಷೇಕಗೈದು, ನಾನಾ ಹೂವು ಮತ್ತು ಆಭರಣಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಮಹಾಮಂಗಳಾರತಿಯ ನಂತರ ನೆರೆದಿದ್ದ ಭಕ್ತ ಸಮೂಹಕ್ಕೆ ತೀರ್ಥ ಪ್ರಸಾದ ವಿತರಿಸಲಾಗಿದ್ದು, ಗ್ರಾಮದ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
