ಮನೆ ಅಂದರೆ ಕೇವಲ ನಾಲ್ಕು ಗೋಡೆಗಳಲ್ಲ… ಮನಸ್ಸಿದ್ದರೆ ಅದೇ ಮನೆ ಆರೋಗ್ಯದ ತಾಣವಾಗಬಹುದು, ಪರಿಸರದ ಪಾಠಶಾಲೆಯಾಗ. ಬಹುದು. ಇದಕ್ಕೆ ಸಾಕ್ಷಿಯಾಗಿದ್ದಾರೆ ಈ ನಿವೃತ್ತ ದಂಪತಿ. ಕೇವಲ 15×20 ಅಡಿ ಜಾಗದಲ್ಲಿ ಹಸಿರಿನ ಲೋಕವನ್ನೇ ಸೃಷ್ಟಿಸಿರುವ ಶ್ರೀಶೈಲ ಹಾಗೂ ಮಲ್ಲಮ್ಮ ದಂಪತಿ, ರಾಸಾಯನಿಕ ಕೃಷಿಗೆ ವಿದಾಯ ಹೇಳಿ, ಮನೆಯಲ್ಲೇ ಬೆಳೆದ ತಾಜಾ ತರಕಾರಿ, ಹಣ್ಣು ಹಾಗೂ ಹೂವುಗಳೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ…


ಒಂದೆಡೆ ವಿಷಕಾರಿ ರಾಸಾಯನಿಕಗಳ ಮೊರೆ ಹೋಗುತ್ತಿರುವ ಕೃಷಿ… ಮತ್ತೊಂದೆಡೆ ಅದೇ ವಿಷದಿಂದ ದೂರವಿದ್ದು, ಮಣ್ಣಿನೊಂದಿಗೆ ಸ್ನೇಹ ಬೆಳೆಸುತ್ತಿರುವ ಈ ದಂಪತಿ… ಇದು ಕೇವಲ ಒಂದು ಕೈತೋಟವಲ್ಲ… ಆರೋಗ್ಯಕ್ಕಾಗಿ ಹೋರಾಡುವ ಮನಸ್ಸಿನ ಕಥೆ… ಪರಿಸರದ ಮೇಲಿನ ಕಾಳಜಿಯ ಕಥೆ… ನಿವೃತ್ತಿಯಲ್ಲೂ ಬದುಕಿಗೆ ಹೊಸ ಅರ್ಥ ಕಂಡುಕೊಂಡ ಕಥೆಯನ್ನು ನಾವು ತೋರ್ಸ್ತಿವಿ ನೋಡಿ… ಕೇವಲ 15×20 ಅಡಿ ಜಾಗ… ಆದರೆ ಇಲ್ಲಿ ಅರಳಿರುವ ಹಸಿರಿಗೆ ಲೆಕ್ಕವೇ ಇಲ್ಲ. ಸಣ್ಣ ಜಾಗದ ಮಡಿಲಲ್ಲಿ ದೊಡ್ಡ ಕನಸು ಮೊಳಕೆಯೊಡೆದಿದೆ. ಮಣ್ಣಿನ ಪ್ರತಿಯೊಂದು ಕಣವೂ ಇವರ ಪರಿಶ್ರಮದ ಕಥೆ ಹೇಳುತ್ತಿದೆ. ಗಿಡಗಳ ಪ್ರತಿಯೊಂದು ಎಲೆಯೂ ಆರೋಗ್ಯದ ಹಸಿರು ಸಂದೇಶ ಸಾರುತ್ತಿದೆ. ವಿಜಯಪುರ ನಗರದ ಶ್ರೀಶೈಲ ಹಾಗೂ ಮಲ್ಲಮ್ಮ ದಂಪತಿ ಮನೆಯ ಸಣ್ಣ ಜಾಗವನ್ನೇ ತಮ್ಮದೇ ಕೃಷಿ ಭೂಮಿಯನ್ನಾಗಿ ಮಾಡಿ ಕೊಂಡಿದ್ದಾರೆ. ಮಾರುಕಟ್ಟೆ ಯಿಂದ ಬರುವ ತರಕಾರಿಯಲ್ಲಿ ರಾಸಾಯನಿಕಗಳ ಬಳಕೆಯ ಬಗ್ಗೆ ಆತಂಕ ಪಡುವ ಬದಲು, ‘ನಮ್ಮ ಆಹಾರವನ್ನು ನಾವೇ ಬೆಳೆಸೋಣ’ ಎಂಬ ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪವೇ ಇಂದು ಅವರ ಮನೆಯಂಗಳದಲ್ಲಿ ಹಸಿರಿನ ಹಬ್ಬವಾಗಿ ಅರಳಿದೆ.
ಇನ್ನೂ ಮನೆಯಲ್ಲೇ ಸಿಗುವ ಎಲೆಗಳು… ಲಿಂಬೆ… ಪೂಜೆಯಲ್ಲಿ ಬಳಕೆಯಾದ ಹೂವುಗಳು… ಹೀಗೆ ಸುತ್ತಮುತ್ತ ಸಿಗುವ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಂಡು ಕೈತೋಟವನ್ನು ಪೋಷಿಸುತ್ತಿದ್ದಾರೆ. ತ್ಯಾಜ್ಯವೆಂದು ತಳ್ಳಿಹಾಕಬಹುದಾದ ವಸ್ತುಗಳಲ್ಲೇ ಹೊಸ ಜೀವದ ಬೀಜ ಬಿತ್ತುತ್ತಿದ್ದಾರೆ. ಪ್ರಕೃತಿಯಿಂದ ಪಡೆದದ್ದನ್ನು ಪ್ರಕೃತಿಗೇ ಮರಳಿಸಿ, ಮಣ್ಣಿನ ಉಸಿರಿಗೆ ಹೊಸ ಚೈತನ್ಯ ತುಂಬುತ್ತಿದ್ದಾರೆ. ಹಾಗಾಗಿ ಇವರ ಅಡುಗೆ ಮನೆಗೆ ಬರುವ ತರಕಾರಿ, ಕೇವಲ ತರಕಾರಿಯಲ್ಲ… ಅದರ ಹಿಂದೆ ಇವರ ಪರಿಶ್ರಮವಿದೆ… ಮಣ್ಣಿನ ಪರಿಮಳವಿದೆ… ಬೆವರಿನ ಸಿಹಿಯಿದೆ… ಆರೋಗ್ಯದ ಕಾಳಜಿಯಿದೆ. ಪ್ರತಿಯೊಂದು ತುತ್ತಿನಲ್ಲೂ ಮನೆಯ ಮಣ್ಣಿನ ಮಮತೆ ಬೆರೆತಿದೆ. ಸೀತಾಫಲ, ರಾಮಫಲ, ಹನುಮಫಲ, ದಾಳಿಂಬೆ, ಚಿಕ್ಕು, ಮಾವು, ಸೇಬು, ಗೋಡಂಬಿ… ಒಂದೆಡೆ ಹಣ್ಣುಗಳ ವೈವಿಧ್ಯ… ಹಣ್ಣಿನ ಪ್ರತಿಯೊಂದು ಬಣ್ಣವೂ ಪ್ರಕೃತಿಯ ಚಿತ್ರಪಟದಂತೆ ಕಂಗೊಳಿಸುತ್ತಿದೆ. ಇನ್ನು ಸೇವಂತಿ, ಗುಲಾಬಿ, ಶಂಖಪುಷ್ಪ, ಗೌರಿ ಪುಷ್ಪ, ದಾಸವಾಳ, ಕಣಗೀಲೆ, ಮಲ್ಲಿಗೆ, ಸದಾ ಮಲ್ಲಿಗೆ, ಕರಿ ಮಲ್ಲಿಗೆ, ದುಂಡು ಮಲ್ಲಿಗೆ… ಇನ್ನೊಂದೆಡೆ ಕಣ್ಣಿಗೆ ಹಬ್ಬ ನೀಡುವ ಹೂಗಳ ಲೋಕ. ಹೂಗಳ ಪರಿಮಳ ಮನೆಯಂಗಳವನ್ನಷ್ಟೇ ಅಲ್ಲ, ಮನಸ್ಸನ್ನೂ ತುಂಬಿಸುತ್ತಿದೆ. ಇಷ್ಟೇ ಅಲ್ಲ… ಪಾಲಕ, ಕೊತ್ತಂಬರಿ, ಪುದೀನಾ, ರಾಜಗೀರಿ, ಮೆಣಸಿನಕಾಯಿ, ಹಾಗಲಕಾಯಿ, ಬದನೆಕಾಯಿ, ಬೆಂಡೆಕಾಯಿ, ಚೌಳಿಕಾಯಿ, ಹೀರೆಕಾಯಿ, ಸೌತೆಕಾಯಿ ಸೇರಿದಂತೆ ಹಲವು ಬಗೆಯ ಸೊಪ್ಪು ಮತ್ತು ತರಕಾರಿಗಳು ಇಲ್ಲಿ ನಳನಳಿಸುತ್ತಿವೆ. ಪ್ರತಿಯೊಂದು ಗಿಡವೂ ಬದುಕಿನ ಸರಳ ಸತ್ಯವೊಂದನ್ನು ಹೇಳುತ್ತಿದೆ — ಕಾಳಜಿ ಕೊಟ್ಟರೆ ಪ್ರಕೃತಿ ಕೈತುಂಬಾ ಕೊಡುಗೆ ನೀಡುತ್ತದೆ.
ನಿವೃತ್ತಿ ಎಂದರೆ ವಿಶ್ರಾಂತಿ ಎಂದುಕೊಳ್ಳುವವರ ನಡುವೆ… ಇವರು ನಿವೃತ್ತಿಯನ್ನು ಹೊಸ ಬದುಕಿನ ಆರಂಭ ಮಾಡಿಕೊಂಡಿದ್ದಾರೆ. ಕೆಲಸದಿಂದ ನಿವೃತ್ತರಾದರೂ, ಬದುಕಿನ ಉತ್ಸಾಹದಿಂದ ಎಂದಿಗೂ ನಿವೃತ್ತರಾಗಿಲ್ಲ. ಬೆಳಗ್ಗೆ ಎದ್ದರೆ ಗಿಡಗಳೊಂದಿಗೆ ಒಡನಾಟ… ಹೂವು ಅರಳಿದರೆ ಸಂತೋಷ… ತರಕಾರಿ ಕೊಯ್ದರೆ ಹೆಮ್ಮೆ… ಒಣಗಿದ ಎಲೆಗೆ ನೀರುಣಿಸಿದರೆ ತೃಪ್ತಿ… ಹೊಸ ಮೊಗ್ಗು ಮೂಡಿದರೆ ಅದು ಇವರಿಗೆ ಹೊಸ ಕನಸಿನ ಉದಯ. ತಮ್ಮ ಕೈಯಾರೆ ಬೆಳೆದ ಆಹಾರವನ್ನು ತಮ್ಮ ಕುಟುಂಬವೇ ಸೇವಿಸುತ್ತಿರುವ ಖುಷಿ, ಇವರ ಬದುಕಿನ ಅತಿ ದೊಡ್ಡ ಸಂಪತ್ತು. ಹಣದಿಂದ ಖರೀದಿಸಲಾಗದ ನೆಮ್ಮದಿ, ಈ ಕೈತೋಟದ ಪ್ರತಿಯೊಂದು ಎಲೆಯಲ್ಲೂ ಇವರಿಗೆ ದೊರೆಯುತ್ತಿದೆ. ಇವರ ಈ ಪರಿಸರ ಸ್ನೇಹಿ ಬದುಕಿಗೆ ಮಗ ಸಂತೋಷ ಹಾಗೂ ಸೊಸೆ ಭಾಗ್ಯಶ್ರೀ ಕೂಡ ಕೈಜೋಡಿಸಿದ್ದಾರೆ. ಅತ್ತೆ-ಮಾವನ ಪರಿಶ್ರಮವನ್ನು ಕೇವಲ ನೋಡುತ್ತಾ ಕುಳಿತುಕೊಳ್ಳದೆ, ಅವರೊಂದಿಗೆ ಕೈಜೋಡಿಸಿರುವ ಭಾಗ್ಯಶ್ರೀ, ಮನೆಯ ಹಿರಿಯರ ಹವ್ಯಾಸವನ್ನೇ ಕುಟುಂಬದ ಆರೋಗ್ಯದ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಒಂದು ಮನೆಯ ಹಸಿರು ಕನಸು, ಇಡೀ ಕುಟುಂಬದ ಜೀವನಶೈಲಿಯಾಗಿ ರೂಪುಗೊಂಡಿದೆ.
ಒಟ್ನಲ್ಲಿ, ಜಾಗ ಕಡಿಮೆ ಎಂದು ನೆಪ ಹೇಳುವವರಿಗೆ 15×20 ಅಡಿ ಜಾಗದಲ್ಲೇ ಹಸಿರಿನ ಸಾಮ್ರಾಜ್ಯ ಕಟ್ಟಬಹುದು ಎಂದು ತೋರಿಸಿದ್ದಾರೆ ಈ ದಂಪತಿ. ಮಾರುಕಟ್ಟೆಯ ತರಕಾರಿ ಚೀಲಕ್ಕಿಂತ, ತಮ್ಮ ಮನೆಯ ಮಣ್ಣಿನಲ್ಲಿ ಬೆಳೆದ ಒಂದು ಹಿಡಿ ಸೊಪ್ಪಿನಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
