ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಬೆಳಗಾವಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪರಭಾಷೆಯಲ್ಲಿ ಅತಂತ್ರರಾಗಿ ಬದುಕುಳಿಯಲು ಪರದಾಡುತ್ತಿದ್ದ ಪಂಜಾಬ್ ಮೂಲದ ಮಾನಸಿಕ ಅಸ್ಥಿರ ವ್ಯಕ್ತಿಯೊಬ್ಬರನ್ನು, ಬೆಳಗಾವಿಯ ಕಾಕತಿ ಪೊಲೀಸರು ಹಾಗೂ ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡದವರು ತಮ್ಮ ಸ್ವಂತ ಕುಟುಂಬದವರಂತೆ ಕಾಳಜಿ ವಹಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.


ಪಂಜಾಬ್ನ ಅಮೃತಸರ ಮೂಲದ ವ್ಯಕ್ತಿಯೊಬ್ಬರು ಮಾನಸಿಕ ಸ್ಥಿತಿ ಬಿಗಡಾಯಿಸಿದ ಅತಂತ್ರ ಸ್ಥಿತಿಯಲ್ಲಿ, ಬೆಳಗಾವಿಯಿಂದ ಸುಮಾರು 30 ಕಿ.ಮೀ ದೂರವಿರುವ ವಂಟಮೂರಿ ಹೈವೇ ಬಳಿ ಟ್ರಕ್ ಡ್ರೈವರ್ ಬಿಟ್ಟು ಹೋಗಿದ್ದರು.
ಕಳೆದ ಎಂಟು ದಿನಗಳಿಂದ ಯಾವುದೇ ಆಹಾರವಿಲ್ಲದೆ, ಹಸಿವು ಮತ್ತು ಹತಾಶೆಯಿಂದ ಅವರು ವಂಟಮೂರಿ ಗ್ರಾಮದ ಸುತ್ತಮುತ್ತಲಿನಲ್ಲಿಯೇ ತಿರುಗಾಡುತ್ತಿದ್ದರು. ಅವರ ಮಾತೃಭಾಷೆ ಪಂಜಾಬಿ ಆಗಿದ್ದರಿಂದ ಸ್ಥಳೀಯರಿಗೆ ಅವರ ಸಂಕಷ್ಟವನ್ನು ಅರ್ಥೈಸಿಕೊಳ್ಳಲು ಕಷ್ಟವಾಗಿತ್ತು.
ಈ ಕುರಿತು ಮಾಹಿತಿ ಪಡೆದ ಕಾಕತಿ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು, ‘ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್’ ಟೀಮ್ನ ಸಮಾಜ ಸೇವಕ ಗಜಾನನ ಗವಾಣೆ ಅವರಿಗೆ ವಿಷಯ ಮುಟ್ಟಿಸಿದರು. ತಕ್ಷಣವೇ ವಂಟಮೂರಿ ಗ್ರಾಮಕ್ಕೆ ಧಾವಿಸಿದ ಗಜಾನನ ಗವಾಣೆ ಮತ್ತು ತಂಡದವರು ಆ ವ್ಯಕ್ತಿಯನ್ನು ವಿಚಾರಣೆ ನಡೆಸಿ, ಅವರ ಬಳಿಯಿದ್ದ ಪಾಕೆಟ್ನಲ್ಲಿ ಸಿಕ್ಕ Aadhaar Card ಆಧಾರದ ಮೇಲೆ ಅವರ ಕುಟುಂಬದವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು.
ನಂತರ ಆ ಅಸಹಾಯಕ ವ್ಯಕ್ತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಬೆಳಗಾವಿಯಿಂದ ದೆಹಲಿವರೆಗೆ ರೈಲು ಟಿಕೆಟ್ ಬುಕ್ ಮಾಡಿಸಿಕೊಡಲಾಯಿತು. ಪ್ರಯಾಣದ ಹಾದಿಯಲ್ಲಿ ಅವರಿಗೆ ಊಟೋಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ, ಅಂತಿಮವಾಗಿ ಅವರನ್ನು ಸುರಕ್ಷಿತವಾಗಿ ಅವರ ಸ್ವಂತ ಊರಿಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ನಿಸ್ವಾರ್ಥ ಸಮಾಜ ಸೇವೆಯಲ್ಲಿ ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿ, ರೈಲ್ವೆ ಪೊಲೀಸರು ಹಾಗೂ ರಾಜು ರಾವುತ್, ಆಶಿಶ್ ಗವಾಣೆ, ಅವಧೂತ್ ತುಡವೇಕರ್ ಮತ್ತು ಪದ್ಮಪ್ರಸಾದ್ ಹುಲಿ ಅವರು ಕೈಜೋಡಿಸಿ ಸಂಪೂರ್ಣ ಸಹಕಾರ ನೀಡಿದ್ದಾರೆ.
