ಮಹಾರಾಷ್ಟ್ರದ ಮಾದಕ ವಸ್ತು ವಿರೋಧಿ ಟಾಸ್ಕ್ ಫೋರ್ಸ್ ಭರ್ಜರಿ ಕಾರ್ಯಾಚರಣೆ ನಡೆಸಿ, ಕೋಳಿ ಫಾರ್ಮ್‌ನ ಹೆಸರಿನಲ್ಲಿ ಎಂಡಿ ಡ್ರಗ್ಸ್ ತಯಾರಿಸಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಿದೆ.

ಬೆಳಗಾವಿ-ಮಹಾರಾಷ್ಟ್ರ ಗಡಿಯಿಂದ ಕೇವಲ 25 ಕಿ.ಮೀ. ದೂರದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಹಾಜಗೋಳಿ ಗ್ರಾಮದ ಹೊರವಲಯದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕೋಳಿ ಫಾರ್ಮ್‌ನಲ್ಲಿ ಅಕ್ರಮವಾಗಿ ಎಂಡಿ ಡ್ರಗ್ಸ್ ತಯಾರಿಸಲಾಗುತ್ತಿತ್ತು ಎಂಬ ಮಾಹಿತಿ ಆಧರಿಸಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಂಬೈನಲ್ಲಿ ನಡೆದ ಡ್ರಗ್ಸ್ ವಿರೋಧಿ ಕಾರ್ಯಾಚರಣೆಯಲ್ಲಿ ದೊರೆತ ಸುಳಿವಿನ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ. ಪುಣೆಯಿಂದ ಬಂದಿದ್ದ ಟಾಸ್ಕ್ ಫೋರ್ಸ್ ಸಿಬ್ಬಂದಿ ಮೂರು ದಿನಗಳ ಕಾಲ ಸಾಮಾನ್ಯ ನಾಗರಿಕರಂತೆ ಸ್ಥಳದಲ್ಲಿ ಓಡಾಡಿ, ಮಾಹಿತಿ ಕಲೆಹಾಕಿದ ಬಳಿಕ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿಯಲ್ಲಿ ಸುಮಾರು 1.13 ಕೋಟಿ ರೂ
ಮೌಲ್ಯದ 208 ಗ್ರಾಂ ಎಂಡಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಡ್ರಗ್ಸ್ ತಯಾರಿಸಲು ಬಳಸುತ್ತಿದ್ದ ವಿವಿಧ ರಾಸಾಯನಿಕಗಳು, ಯಂತ್ರೋಪಕರಣಗಳು ಹಾಗೂ ಇತರ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬೆಳಗಾವಿ ಮೂಲದ ಇಬ್ಬರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ಮುಂದುವರಿದಿದ್ದು, ಈ ಜಾಲದ ಹಿಂದೆ ಮತ್ತಷ್ಟು ಮಂದಿ ಇದ್ದಾರೆಯೇ ಹಾಗೂ ಡ್ರಗ್ಸ್ ಪೂರೈಕೆ ಜಾಲ ಎಷ್ಟು ವಿಸ್ತಾರವಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಚಂದಗಡ ತಾಲೂಕಿನಲ್ಲಿ ನಡೆದ ಪ್ರಮುಖ ಡ್ರಗ್ಸ್ ವಿರೋಧಿ ಕಾರ್ಯಾಚರಣೆಗಳಲ್ಲಿ ಇದು ಮೂರನೇ ಅತಿದೊಡ್ಡ ಕಾರ್ಯಾಚರಣೆ ಎಂದು ತಿಳಿದುಬಂದಿದೆ. ಈ ಹಿಂದಿನ ದಾಳಿಗಳ ವೇಳೆ ಚಂದಗಡ ಭಾಗದಿಂದ ಬೆಂಗಳೂರಿಗೂ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರಿನ ಶೆಡ್‌ವೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಮಹಾರಾಷ್ಟ್ರ ಪೊಲೀಸರು ವಶಪಡಿಸಿಕೊಂಡಿದ್ದರು.
ಬೆಳಗಾವಿಗೆ ಸಮೀಪದಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಗಡಿಭಾಗದಲ್ಲಿ ಮಾದಕ ವಸ್ತುಗಳ ಅಕ್ರಮ ಜಾಲದ ವಿರುದ್ಧ ಪೊಲೀಸರು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
