ಶ್ರಾವಣ ಮಾಸದ ಪವಿತ್ರ ಸೋಮವಾರದ ಸಂಭ್ರಮದಲ್ಲಿ ದಕ್ಷಿಣ ಕಾಶಿ ಖ್ಯಾತಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಭಕ್ತರೊಬ್ಬರ ಬಹುದಿನಗಳ ಭವ್ಯ ಸಂಕಲ್ಪವೊಂದು ನಾಳೆ ಸಾಕಾರಗೊಳ್ಳಲಿದ್ದು, ಕಪಿಲೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರನ್ನು ಮಂತ್ರಮುಗ್ಧಗೊಳಿಸಲು ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಬಿಲ್ವಪತ್ರೆಗಳಿಂದ ನಿರ್ಮಿಸಲಾದ ಬೃಹತ್ ಹಾರ ಸಜ್ಜಾಗಿದೆ.
ಬೆಳಗಾವಿಯ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾದ ದಕ್ಷಿಣ ಕಾಶಿ ಕಪಿಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜಾ ಕೈಂಕರ್ಯಗಳ ವೇಳೆ ಭಕ್ತರ ಸಡಗರ ಮೇರೆಮೀರಲಿದೆ. ದೇವರಿಗೆ ವಿಶೇಷವಾಗಿ ಅರ್ಪಿಸಬೇಕು ಎಂಬ ಉದ್ದೇಶದಿಂದ ಕೈಗೊಂಡಿದ್ದ ಒಂದು ಲಕ್ಷಕ್ಕೂ ಅಧಿಕ ಬಿಲ್ವಪತ್ರೆಗಳ ಹಾರ ತಯಾರಿಕೆಯ ಮಹಾಸಂಕಲ್ಪವು ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿವಿಧ ಮಹಿಳಾ ಭಗಿನಿಯರು ಹಾಗೂ ದೇವಸ್ಥಾನದ ಟ್ರಸ್ಟ್ ಮಂಡಳಿಯ ಸಂಪೂರ್ಣ ಸಹಕಾರದಿಂದ ಸಿದ್ಧಗೊಂಡಿರುವ ಈ ಕಲಾತ್ಮಕ ಹಾಗೂ ದಿವ್ಯ ಹಾರವು ನಾಳೆ ಕಪಿಲೇಶ್ವರ ದೇವರ ದಿವ್ಯ ಚರಣಗಳಿಗೆ ಸಮರ್ಪಣೆಯಾಗಲಿದೆ.
ಈ ಅಪೂರ್ವ ಹಾಗೂ ಭಕ್ತಿಪೂರಿತ ಸನ್ನಿವೇಶವನ್ನು ಕಣ್ಣುಂಬಿಕೊಳ್ಳಲು ನಾಳೆ ನೂರಾರು ಸಂಖ್ಯೆಯಲ್ಲಿ ಶಿವಭಕ್ತರು ಕಪಿಲೇಶ್ವರ ಮಂದಿರಕ್ಕೆ ಆಗಮಿಸಲಿದ್ದಾರೆ. ಶ್ರಾವಣ ಮಾಸದ ಈ ಪವಿತ್ರ ದಿನದಂದು ನಡೆಯಲಿರುವ ಈ ವಿಶೇಷ ಅರ್ಪಣೆಯು ಇಡೀ ದೇವಸ್ಥಾನದ ಪರಿಸರದಲ್ಲಿ ಶಿವಮಯ ವಾತಾವರಣವನ್ನು ಸೃಷ್ಟಿಸಲಿದ್ದು, ಭಕ್ತರ ಧಾರ್ಮಿಕ ಭಾವನೆಗಳಿಗೆ ಮಹತ್ವದ ಮೆರುಗು ನೀಡಲಿದೆ. ಬೈಟ್

\
