ಖಾನಾಪುರ ತಾಲೂಕಿನ ನಂದಗಡ, ಬೀಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಾಂತತಾ ಸಭೆ ನಡೆಯಿತು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ, ಎಲ್ಲರೂ ಒಗ್ಗಟ್ಟಿನಿಂದ ಹಬ್ಬವನ್ನು ಆಚರಿಸಬೇಕು ಎಂದು ನಂದಗಡ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಮನವಿ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ಅವರು ಗ್ರಾಮಸ್ಥರಿಗೆ ಕರೆ ನೀಡಿದ್ದಾರೆ.

ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ, ಕಕ್ಕೇರಿ ಹಾಗೂ ಗಂದಿಗವಾಡ ಸೇರಿದಂತೆ ವಿವಿಧ ಪ್ರಮುಖ ಗ್ರಾಮಗಳಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಮುನ್ನೆಚ್ಚರಿಕೆಯಾಗಿ ಶಾಂತತಾ ಸಭೆಗಳನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಅವರು, “ಸಮಾಜದಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಹಬ್ಬಗಳನ್ನು ಸಂಭ್ರಮಿಸಬೇಕು; ಸಾರ್ವಜನಿಕ ಸಂಚಾರ ಹಾಗೂ ನೆಮ್ಮದಿಗೆ ಭಂಗ ತರದಂತೆ ಶಾಂತಿಯುತವಾಗಿ ಆಚರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ತಿಳಿಸಿದರು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ನೀಡಿದ ಅವರು, ಪೋಲಿಸ್ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಕೋರಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಯಾ ಗ್ರಾಮಗಳ ಮುಸ್ಲಿಂ ಬಾಂಧವರು ಹಾಗೂ ಮುಖಂಡರು ಇಲಾಖೆಯ ಮಾರ್ಗದರ್ಶನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
