ಖಾನಾಪುರ ತಾಲೂಕಿನ ಗಾಂಧಿನಗರ ಹಾಗೂ ಹಲಕರ್ಣಿ ಭಾಗದಲ್ಲಿ ಕಳೆದ 25-30 ವರ್ಷಗಳಿಂದ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲೇ ದಿನ ದೂಡುತ್ತಿರುವ ಬಡ ಕುಟುಂಬಗಳು ಈಗ ಸರ್ಕಾರದ ಬಾಗಿಲು ತಟ್ಟಿವೆ. ಹತ್ತರಗುಂಜಿ ಗ್ರಾಮದ ಸರ್ವೇ ನಂಬರ್ 24ರ ಸರ್ಕಾರಿ ಜಾಗದಲ್ಲಿ ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಅವರಿಗೆ ಅರ್ಜಿ ಸಲ್ಲಿಸಲಾಗಿದೆ.

ಸರ್ಕಾರಿ ಜಾಗದಲ್ಲಿ ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಆಗ್ರಹಿಸಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಅವರಿಗೆ ಅರ್ಜಿ ಸಲ್ಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಂಧಿನಗರ ಹಾಗೂ ಸುತ್ತಮುತ್ತಲಿನ ಬಡ ಜನರು ದಶಕಗಳಿಂದ ಸ್ವಂತ ಮನೆ ಇಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ದಿನಗೂಲಿ ಮಾಡಿ ಜೀವನ ಸಾಗಿಸುವ ಈ ಕುಟುಂಬಗಳು, ಪ್ರತಿ ತಿಂಗಳು ₹2,000 ರಿಂದ ₹5,000 ವರೆಗೆ ಮನೆ ಬಾಡಿಗೆ ತೆರಲಾಗದೆ ಕಂಗಾಲಾಗಿವೆ. ಈ ಹಿಂದೆ ಸರ್ವೇ ನಂಬರ್ 24ರಲ್ಲಿ ಹಾಕಿಕೊಂಡಿದ್ದ ಜೋಪಡಿಗಳನ್ನು ವಿದ್ಯುತ್ ಹಾಗೂ ಮಕ್ಕಳ ಶಿಕ್ಷಣದ ನೆಪವೊಡ್ಡಿ ತೆರವುಗೊಳಿಸಲಾಗಿತ್ತು. ಆದರೆ, ವರ್ಷಗಳು ಕಳೆದರೂ ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸದೆ ಬಾಡಿಗೆ ಮನೆಗಳಲ್ಲಿ ಕಾಲ ಕಳೆಯುವಂತೆ ಮಾಡಲಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಪ್ರಸ್ತುತ ಹತ್ತರಗುಂಜಿ ಗ್ರಾಮದ ಸರ್ವೇ ನಂಬರ್ 24ರಲ್ಲಿರುವ ಖಾಲಿ ಸರ್ಕಾರಿ ಜಮೀನಿನಲ್ಲಿ ಅರ್ಹ ಬಡ ಕುಟುಂಬಗಳಿಗೆ ನಿವೇಶನ ಹಂಚಿ, ಸರ್ಕಾರಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕೆಂದು ಅನೀತಾ ಸುರೇಶ್ ದಂಡಗಲ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಬಡ ಕೂಲಿ ಕಾರ್ಮಿಕರಿಗೆ ಸ್ವಂತ ಜಾಗ ಖರೀದಿ ಮಾಡುವುದು ಅಸಾಧ್ಯವಾಗಿದ್ದು, ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳು, ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ.
