Belagavi

ಬೆಳಗಾವಿಯಲ್ಲಿ ಭಕ್ತಿಭಾವದಲ್ಲಿ ಶ್ರೀ ವರಮಹಾಲಕ್ಷ್ಮೀ ಹಬ್ಬದಾಚರಣೆ…

Share

ಕುಂದಾನಗರಿ ಬೆಳಗಾವಿಯಲ್ಲಿ ವರಮಹಾಲಕ್ಷ್ಮಿ ವ್ರತದ ಸಂಭ್ರಮ ಕಳೆಗಟ್ಟಿದೆ. ನಗರದ ಮನೆ-ಮನೆಗಳಲ್ಲಿ ಹಾಗೂ ಪ್ರಸಿದ್ಧ ದೇವಾಲಯಗಳಲ್ಲಿ ತಾಯಿಯ ಆರಾಧನೆ ಶ್ರದ್ಧಾ-ಭಕ್ತಿಯಿಂದ ಜರುಗಿದ್ದು, ಶ್ರೀ ಮಹಾಲಕ್ಷ್ಮಿ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿವೆ.

ಪವಿತ್ರ ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರ್ಮಿಕ ವಾತಾವರಣ ಮನೆಮಾಡಿತ್ತು. ಮನೆ ಮನೆಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ, ವರಗಳನ್ನು ಕರುಣಿಸುವಂತೆ ಪ್ರಾರ್ಥಿಸಲಾಯಿತು. ಮುತ್ತೈದೆಯರಿಗೆ ಅರಿಶಿಣ-ಕುಂಕುಮ ನೀಡಿ ಹಬ್ಬವನ್ನು ಸಂಭ್ರಮಿಸಲಾಯಿತು. ನಗರದ ಬಸವನ ಗಲ್ಲಿಯಲ್ಲಿರುವ ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ವ್ರತ ಹಾಗೂ ಶ್ರಾವಣ ಶುಕ್ರವಾರದ ಪೂಜಾ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ವರಮಹಾಲಕ್ಷ್ಮಿ ಪರ್ವಕಾಲದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ದೇವಿಗೆ ವಿಶೇಷ ಮಹಾ ಅಭಿಷೇಕ, ಕುಂಕುಮಾರ್ಚನೆ ಹಾಗೂ ಮನಮೋಹಕ ಅಲಂಕಾರ ಪೂಜೆಗಳನ್ನು ನೆರವೇರಿಸಲಾಯಿತು. ದೇವಾಲಯದ ಹೊರಗೆ ಸುದೀರ್ಘ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳು ತಾಯಿಯ ದಿವ್ಯ ದರ್ಶನ ಪಡೆದರು. ನೂರಾರು ಮಹಿಳೆಯರು ಹಾಗೂ ಭಕ್ತಾದಿಗಳು ದೇವಿಗೆ ಉಡಿ ತುಂಬಿ, ಸೀರೆಗಳನ್ನು ಅರ್ಪಿಸಿ ತಮ್ಮ ಮನದ ಅಭೀಷ್ಟೆಗಳನ್ನು ಈಡೇರಿಸುವಂತೆ ಭಕ್ತಿಯಿಂದ ಪ್ರಾರ್ಥಿಸಿದರು. ಕಳೆದ 300 ವರ್ಷಗಳಿಂದ ತಮ್ಮ ಅಜ್ಜ-ಅಜ್ಜಂದಿರ ಕಾಲದಿಂದಲೂ ವಂಶಸ್ಥರು ಪರಂಪರಾಗತವಾಗಿ ಈ ದೇವಾಲಯದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ಅರ್ಚಕರಾದ ನಾಮದೇವ ಕುಂಬಾರ ತಿಳಿಸಿದರು.

ಪೂಜೆಯ ಸಂದರ್ಭದಲ್ಲಿ ದೇಶ ಕಾಯುವ ಸೈನಿಕರಿಗೆ, ಅನ್ನ ನೀಡುವ ರೈತರಿಗೆ ಹಾಗೂ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ದರ್ಶನ ಪಡೆದ ಎಲ್ಲಾ ಭಕ್ತಾದಿಗಳಿಗೆ ಅಭಿಷೇಕದ ಪವಿತ್ರ ಪ್ರಸಾದ ಹಾಗೂ ಮಹಾಪ್ರಸಾದ ವಿತರಿಸಲಾಯಿತು.

Tags:

error: Content is protected !!