ಮಹಿಳೆಯರು ಹಾಗೂ ಬಾಲಕಿಯರಲ್ಲಿ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಳಗಾವಿಯ ‘ಹಸಿರು ಫೌಂಡೇಶನ್’ ಬೃಹತ್ ಉಪಕ್ರಮವನ್ನು ಕೈಗೊಂಡಿದೆ. ಸಂಘಟನೆಯ ವತಿಯಿಂದ ಮಹಿಳೆಯರಿಗೆ ಹಾಗೂ ಹಿಂಡಲಗಾ ಕಾರಾಗೃಹದ ಕೈದಿಗಳಿಗೆ ಉಚಿತ ಹೈಜಿನ್ ಕಿಟ್ಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯ ನಡೆಸಲಾಗಿದೆ.

ಬೆಳಗಾವಿಯಲ್ಲಿ ಹಸಿರು ಫೌಂಡೇಶನ್ (Hasiru Foundation) ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್, ಟೂತ್ಪೇಸ್ಟ್, ಟೂತ್ಬ್ರಶ್, ಇಯರ್ಬಡ್ಸ್, ಹ್ಯಾಂಡ್ವಾಶ್, ಸ್ಯಾನಿಟೈಸರ್, ಸಾಬೂನು ಹಾಗೂ ಗ್ಲೌವ್ಸ್ ಒಳಗೊಂಡ ಹೈಜಿನ್ ಕಿಟ್ಗಳನ್ನು ವಿತರಿಸಲಾಯಿತು. ಇದಕ್ಕೂ ಮುನ್ನ, ಕಾರಾಗೃಹದಲ್ಲಿರುವವರಲ್ಲಿ ವೈಯಕ್ತಿಕ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಿಂಡಲಗಾ ಕಾರಾಗೃಹದ ಕೈದಿಗಳಿಗೂ 50 ಹೈಜಿನ್ ಕಿಟ್ಗಳನ್ನು ಹಸ್ತಾಂತರಿಸಲಾಗಿತ್ತು. ಈ ವೇಳೆ ಮುಟ್ಟಿನ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು, ದೈನಂದಿನ ಆರೋಗ್ಯಕರ ಅಭ್ಯಾಸಗಳು ಹಾಗೂ ಕೈಗಳ ಸ್ವಚ್ಛತೆಯ ಮಹತ್ವದ ಕುರಿತು ಮಹಿಳೆಯರು ಮತ್ತು ಬಾಲಕಿಯರಿಗೆ ಮಾರ್ಗದರ್ಶನ ನೀಡಲಾಯಿತು.
ಹಸಿರು ಫೌಂಡೇಶನ್ನ ಸಂಸ್ಥಾಪಕರಾದ ಪ್ರೀತಿ ಸಾವಂತ್ (Preeti Sawant) ಹಾಗೂ ಪ್ರೀತಮ್ ಸಿಂಗ್ ಮುರ್ಗೋಡ್ (Preetam Singh Murgod) ಅವರ ಮಾರ್ಗದರ್ಶನದಲ್ಲಿ, ಸ್ವಯಂಸೇವಕರ ಸಹಕಾರದೊಂದಿಗೆ ಈ ಸೇವಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಸಂಸ್ಥೆಯು ಒಟ್ಟಾರೆಯಾಗಿ 1000 ಹೈಜಿನ್ ಕಿಟ್ಗಳನ್ನು ವಿತರಿಸುವ ಬೃಹತ್ ಗುರಿಯನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಈ ಸಂಸ್ಥೆಯು, ಉಚಿತ ಕೌಶಲ್ಯ ತರಬೇತಿ, ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಹಾಗೂ ಬಡ ವರ್ಗದ ಜನರಿಗೆ ಆಹಾರ ವಿತರಣೆಯಂತಹ ಹಲವು ಕಾರ್ಯಕ್ರಮಗಳ ಮೂಲಕ “ಸ್ವಚ್ಛತೆ, ಶಿಕ್ಷಣ, ಸ್ವಾವಲಂಬನೆ ಮತ್ತು ಗೌರವ — ಪ್ರತಿಯೊಬ್ಬರಿಗೂ” ಎಂಬ ಸಂದೇಶವನ್ನು ತಲುಪಿಸುತ್ತಿದೆ.
