Belagavi

ಬೆಳಗಾವಿ: ಅಪೇಕ್ಸ್ ಖಾಸಗಿ ಕಂಪನಿಯಿಂದ ಠೇವಣಿ ಹಣ ವಂಚನೆ ಆರೋಪ; DC ಕಚೇರಿ ಎದುರು ಠೇವಣಿದಾರರ ಪ್ರತಿಭಟನೆ

Share

ಅಪೇಕ್ಸ್ ಖಾಸಗಿ ಕಂಪನಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿ ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ, ನೂರಾರು ಠೇವಣಿದಾರರು ಗುರುವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಗಮನ ಸೆಳೆದ ಪ್ರತಿಭಟನಾಕಾರರು, ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಭವಿಷ್ಯದ ಭದ್ರತೆಗಾಗಿ ಹಾಗೂ ಹೆಚ್ಚಿನ ಲಾಭದ ನಿರೀಕ್ಷೆಯಿಂದ ಅಪೇಕ್ಸ್ ಖಾಸಗಿ ಕಂಪನಿಯಲ್ಲಿ ಠೇವಣಿಯಾಗಿ ಇಟ್ಟಿದ್ದೇವೆ. ಆದರೆ ನಿಗದಿತ ಅವಧಿ ಪೂರ್ಣಗೊಂಡರೂ ಠೇವಣಿ ಹಣ ಹಾಗೂ ಬಡ್ಡಿ ಹಣವನ್ನು ಮರಳಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಠೇವಣಿದಾರರು, ತಮ್ಮ ಹಣವನ್ನು ಶೀಘ್ರವಾಗಿ ವಾಪಸ್ ಕೊಡಿಸುವಂತೆ ಘೋಷಣೆಗಳನ್ನು ಕೂಗಿದರು. ಕಂಪನಿಯ ವ್ಯವಹಾರಗಳು ಹಾಗೂ ಠೇವಣಿದಾರರಿಂದ ಸಂಗ್ರಹಿಸಲಾದ ಹಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಖಾಸಗಿ ಕಂಪನಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿ ನೀಡದೆ ವಂಚನೆ ಮಾಡಲಾಗಿದೆ. ಹಣವನ್ನು ಮರಳಿ ನೀಡುವಂತೆ ಕಂಪನಿ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮರ್ಪಕ ಸ್ಪಂದನೆ ದೊರೆಯಲಿಲ್ಲ. ಇದರಿಂದಾಗಿ ಠೇವಣಿದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಕುಟುಂಬಗಳ ಜೀವನ ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ ಎಂದು ಅಳಲು ತೋಡಿಕೊಂಡರು.

ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವ ಹಲವು ಠೇವಣಿದಾರರು ತಮ್ಮ ಜೀವನದ ಉಳಿತಾಯ, ನಿವೃತ್ತಿ ಹಣ, ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ಅಗತ್ಯಗಳಿಗಾಗಿ ಇಟ್ಟಿದ್ದ ಹಣ ವಾಪಸ್ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಕೆಲವರು ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದು, ಇದೀಗ ಹಣ ಮರಳಿ ಸಿಗದ ಕಾರಣ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಿದರು.
ಕಂಪನಿಯ ಹಣಕಾಸು ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ, ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಬೇಕು. ಹಣ ವಾಪಸ್ ನೀಡಲು ವಿಳಂಬ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಠೇವಣಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

Tags:

error: Content is protected !!