ಉಳುವವನೇ ಭೂಮಿಯ ಒಡೆಯ” ಕಾಯ್ದೆಯ ಮೂಲಕ ಬಡವರಿಗೆ ಭೂಮಿ ಸಿಗುವಂತೆ ಮಾಡಿದ ಕ್ರಾಂತಿಕಾರಿ ನಾಯಕ ಡಿ. ದೇವರಾಜ ಅರಸು ಅವರ ತತ್ವ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯುತ್ಸವದ ಅಂಗವಾಗಿ ಡಿ. ದೇವರಾಜ್ ಅರಸು ಅವರ ಬೃಹತ್ ಭಾವಚಿತ್ರ ಮೆರವಣಿಗೆ ನಡೆಯಿತು.
ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೋಳ್ಳಿ, ಅಪರ್ ಜಿಲ್ಲಾಧಿಕಾರಿಗಳಾದ ವಿಜಯ್ ಕುಮಾರ್ ಹೊನಕೇರಿ ಇನ್ನುಳಿದ ಗಣ್ಯರು ಡೊಳ್ಳು ಬಾರಿಸುವ ಮೂಲಕ ಚಾಲನೆಯನ್ನು ನೀಡಿದರು.
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯುತ್ಸವದ ಅಂಗವಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆಯ ಮೂಲಕ ಬಡವರಿಗೆ ಭೂಮಿ ಸಿಗುವಂತೆ ಮಾಡಿದ ಕ್ರಾಂತಿಕಾರಿ ನಾಯಕ ದೇವರಾಜ ಅರಸು ಅವರ ತತ್ವ ಹಾಗೂ ಮೌಲ್ಯಗಳನ್ನು ನಾವು ಕಾರ್ಯಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು. ಇದೇ ವೇಳೆ ನಗರದಿಂದ ಕೊಂಚ ದೂರವಿರುವ ಹಿಂದುಳಿದ ವರ್ಗಗಳ ಇಲಾಖೆ ಕಚೇರಿಯನ್ನು ಸೆಂಟ್ರಲ್ ಭಾಗಕ್ಕೆ ಸ್ಥಳಾಂತರಿಸಲು ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಹಾಸ್ಟೆಲ್ ಹಾಗೂ ಕಚೇರಿಗಳಿಗೆ ತೆರಳಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ NWKRTC ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಸೂಕ್ತ ಬಸ್ ಸೌಕರ್ಯ ಕಲ್ಪಿಸಲಾಗುವುದು ಎಂದರು. ಅಲ್ಲದೆ, ನಗರದಲ್ಲಿ ₹75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮುಂದಿನ 1.5 ರಿಂದ 2 ವರ್ಷಗಳಲ್ಲಿ ಪೂರ್ಣಗೊಂಡು ಎಲ್ಲಾ ಆಧುನಿಕ ಸೌಲಭ್ಯ ಹಾಗೂ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.
ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಿಂದ ಕೋರ್ಟ್ ರಸ್ತೆ, ಆರ್.ಟಿ.ಓ. ಸಂಗೋಳ್ಳಿ ರಾಯಣ್ಣ ರಸ್ತೆ, ಎಸ್ಪಿ. ಆಫೀಸ್ ರಸ್ತೆ ಮಾರ್ಗವಾಗಿ ಕುಮಾರಗಂಧರ್ವ ಕಲಾ ಮಂದಿರಕ್ಕೆ ತಲುಪಿ ಮೆರವಣಿಗೆಯೂ ಕೊನೆಗೊಂಡಿತು.
