ಬೆಳಗಾವಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮಾಳಮಾರುತಿ ಠಾಣೆಯ ಪೊಲೀಸರು ಭಾರಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ರಿಮಿನಲ್ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಆರೋಪಿಯನ್ನು ದ್ವಿಚಕ್ರ ವಾಹನ ಹಾಗೂ ಆಯುಧಗಳ ಸಮೇತ ಬಂಧಿಸಲಾಗಿದೆ.

ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಯುವ ದೃಷ್ಟಿಯಿಂದ ಆಗಸ್ಟ್ 16, 2026 ರಂದು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್’ ತಂಡದಿಂದ ಗಸ್ತು ಮತ್ತು ಪರಿಶೀಲನೆ ನಡೆಸಲಾಗುತ್ತಿತ್ತು. ಈ ವೇಳೆ ಗಾಂಧಿ ನಗರದ ಅಮೀನಗಲ್ಲಿಯಲ್ಲಿ ಸಂಶಯಾಸ್ಪದವಾಗಿ ಚಲಿಸುತ್ತಿದ್ದ ಗಾಂಧಿ ನಗರದ ಗುಲ್ಜಾರ್ ಗಲ್ಲಿ ನಿವಾಸಿ ರೇಹಾನ್ ಇಸ್ಮಾಯಿಲ್ ನದಾಫ್ (20) ಎಂಬಾತನನ್ನು ತಡೆದು ತನಿಖೆ ನಡೆಸಲಾಯಿತು. ಅಪರಾಧಿಕ ಕೃತ್ಯವೆಸಗುವ ಉದ್ದೇಶದಿಂದ ಹೊರಟಿದ್ದ ಈತನ ಬಳಿಯಿದ್ದ ಬರ್ಗ್ಮ್ಯಾನ್ ದ್ವಿಚಕ್ರ ವಾಹನದಲ್ಲಿ (KA-22/HW-7215) ಮಾರಕಾಸ್ತ್ರಗಳಾದ 1 ಕಬ್ಬಿಣದ ಕೊಡಲಿ, 1 ಬಾಕು ಹಾಗೂ 1 ಕೊಯ್ತಾ ಸೇರಿ ಒಟ್ಟು 3 ಹರಿತವಾದ ಆಯುಧಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಮಾಳಮಾರುತಿ ಠಾಣೆಯ ಪಿಎಸ್ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿಯವರು ಈ ಕಾರ್ಯಚರಣೆ ನಡೆಸಿದ್ದು, ಆರೋಪಿಯ ವಿರುದ್ಧ ಆರ್ಮ್ಸ್ ಆಕ್ಟ್ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಪೊಲೀಸರ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.
