Belagavi

ರಾಮ್‌ದೇವ್ ಹೋಟೆಲ್ ನಾಗದೇವಸ್ಥಾನದಲ್ಲಿ ನಾಗಪಂಚಮಿ ವೈಭವ: ಸಾವಿರಾರು ಭಕ್ತರಿಗೆ ಮಹಾಪ್ರಸಾದ ಸೇವೆ

Share

ಬೆಳಗಾವಿಯ ನೆಹರೂ ನಗರದಲ್ಲಿರುವ ಪ್ರಸಿದ್ಧ ರಾಮ್‌ದೇವ್ ಹೋಟೆಲ್ ಆವರಣದ ನಾಗದೇವಸ್ಥಾನದಲ್ಲಿ ನಾಗಪಂಚಮಿ ಹಾಗೂ ಶ್ರಾವಣ ಮಾಸದ ಮೊದಲ ಸೋಮವಾರದ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಈ ಪವಿತ್ರ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ನಾಗದೇವತೆಯ ದರ್ಶನ ಪಡೆದು, ಮಹಾಪ್ರಸಾದ ಸ್ವೀಕರಿಸಿದರು.

ಶ್ರಾವಣ ಮಾಸದ ಶುಭಾರಂಭದೊಂದಿಗೆ ಆಗಮಿಸುವ ಮೊದಲ ಹಬ್ಬವಾದ ನಾಗಪಂಚಮಿಯ ದಿನ ಬೆಳಗಾವಿಯ ನೆಹರೂ ನಗರದ ರಾಮ್‌ದೇವ್ ಹೋಟೆಲ್ ನಾಗದೇವಸ್ಥಾನದಲ್ಲಿ ವಾರ್ಷಿಕ ವಿಶೇಷ ಪೂಜಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಮಾಲೀಕರಾದ ರಘುರಾಮ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು ತಲೆಮಾರಿನಿಂದಲೂ ಈ ಪೂಜಾ ಕಾಯಕವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯದ ಮಾದರಿಯಲ್ಲೇ ದರ್ಶನದ ಅನುಕೂಲ ಕಲ್ಪಿಸಲಾಗಿದ್ದು, ಬೆಳಗಾವಿ ಹಾಗೂ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು ದೇವಸ್ಥಾನಕ್ಕೆ ಭೇಟಿ ನೀಡಿ ಕೃಪೆಗೆ ಪಾತ್ರರಾದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಶರ್ಮ ಮಾತನಾಡಿ, “ನಾಗಪಂಚಮಿಯು ಹೆಣ್ಣುಮಕ್ಕಳಿಗೆ ಹಾಗೂ ತವರೂರಿನ ಬಾಂಧವ್ಯಕ್ಕೆ ವಿಶೇಷ ಮಹತ್ವವುಳ್ಳ ಹಬ್ಬವಾಗಿದೆ. ಅಷ್ಟಕುಲ ನಾಗರಾದ ವಾಸುಕಿ, ಶೇಷ ಸೇರಿದಂತೆ ಪ್ರಮುಖ ನಾಗದೇವತೆಗಳನ್ನು ಆರಾಧಿಸುವುದರಿಂದ ಸಂಪತ್ತು, ಸಂತಾನ ಭಾಗ್ಯ ಮತ್ತು ಆರೋಗ್ಯ ಸಿದ್ಧಿಸಲಿದೆ” ಎಂದು ತಿಳಿಸಿದರು. ಈ ಹಿಂದೆ ಸಣ್ಣ ಪ್ರಮಾಣದಲ್ಲಿದ್ದ ಮೂರ್ತಿಯನ್ನು ನವೀಕರಿಸಿ ಸುಂದರ ದೇವಸ್ಥಾನವಾಗಿ ನಿರ್ಮಿಸಲಾಗಿದ್ದು, ಸರ್ವ ಭಕ್ತಾದಿಗಳಿಗೂ ನಾಗದೇವರು ಆಯುರಾರೋಗ್ಯ ಕರುಣಿಸಲಿ ಎಂದು ಅವರು ಹಾರೈಸಿದರು.

ವಿಶೇಷ ಪೂಜೆಯ ಬಳಿಕ ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಭವ್ಯ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ನಿರಂತರವಾಗಿ ಪ್ರಸಾದ ವಿನಿಯೋಗ ನಡೆದಿದ್ದು, ಭಕ್ತರು ಅತ್ಯಂತ ಶ್ರದ್ಧೆಯಿಂದ ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು. ಇಲ್ಲಿಗೆ ಆಗಮಿಸಿ ಏನೇ ಬೇಡಿಕೊಂಡರೂ ಈಡೇರುತ್ತದೆ ಎಂಬ ದೃಢ ನಂಬಿಕೆ ತಮಗಿದೆ ಎಂದು ಸ್ಥಳೀಯ ಭಕ್ತಾದಿಗಳು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿದ್ಧರು.

Tags:

error: Content is protected !!