Belagavi

“ಸ್ವಾತಂತ್ರ್ಯವೆಂಬುದು ಕೇವಲ ಶಬ್ದ ರೂಪದ ಹಕ್ಕಲ್ಲ, ಇದು ನಮ್ಮಜವಾಬ್ದಾರಿ”

Share

ಬೆಳಗಾವಿ ನಗರದ ಮಹಾಂತೇಶ ನಗರದಲ್ಲಿರುವ ಎಮಿನೆಂಟ್ ಕೋಚಿಂಗ್ ಕ್ಲಾಸ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಎಂಬುದು ನಮಗೆ ದೊರೆತ ಕೇವಲ ಶಬ್ದದ ರೂಪದ ಹಕ್ಕಲ್ಲ, ಅದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ. ಇಂತಹ ಸ್ವಾತಂತ್ರ್ಯವನ್ನು ಗಳಿಸುವಲ್ಲಿ ನಮ್ಮ ದೇಶದ ಅನೇಕ ಮಹಾತ್ಮರು, ವೀರರು, ಧೀರರು, ಯೋಧರು, ಯುವಕರು ತಮ್ಮ ಹೋರಾಟ, ಸತ್ಯಾಗ್ರಹ, ಚಳವಳಿ ಹಾಗೂ ಬಲಿದಾನವನ್ನು ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಇಂದಿನ ಭಾರತದ ಪ್ರಜೆಗಳಾದ ನಾವು ಇದನ್ನೆಲ್ಲವನ್ನು ಅರಿತು ನಮ್ಮ ದೇಶದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಅಭಿವೃದ್ಧಿಯಲ್ಲಿ ಸತತವಾಗಿ ಶ್ರಮಿಸಬೇಕು. ಸ್ವಾತಂತ್ರ್ಯದ ಮೌಲ್ಯವನ್ನು ಅರಿತು, ಶಿಸ್ತು, ಜ್ಞಾನ ಮತ್ತು ದೇಶಪ್ರೇಮವನ್ನು ಜೀವನದ ಆದರ್ಶವನ್ನಾಗಿಸಿಕೊಂಡು ನವಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಕೊಡುಗೆ ನೀಡಬೇಕು. ನಮ್ಮ ಮಕ್ಕಳ ಸಾಧನೆಯಲ್ಲಿ ಸಂಸ್ಥೆಯ ಹೆಮ್ಮೆ ಅಡಗಿದೆ, ಅವರ ಉಜ್ವಲ ಭವಿಷ್ಯವೇ ನಮ್ಮ ರಾಷ್ಟ್ರದ ಉಜ್ವಲ ಭವಿಷ್ಯವಾಗಲಿ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ ಕೌಲಗಿಯವರು ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯವರಾದ ಶ್ರೀಮತಿ ಭಾಷ್ಯಲಕ್ಷ್ಮಿ ಎಂ. ಕೌಲಗಿಯವರು ಮಾತನಾಡಿ, “ಸ್ವಾತಂತ್ರ್ಯವು ನಮಗೆ ದೊರೆತ ಉಡುಗೊರೆಯಲ್ಲ; ಅಸಂಖ್ಯಾತ ಹೋರಾಟಗಾರರ ತ್ಯಾಗದಿಂದ ಗಳಿಸಿದ ಅಮೂಲ್ಯ ಪರಂಪರೆ. ಅದನ್ನು ಗೌರವಿಸುವ ಅತ್ಯುತ್ತಮ ಮಾರ್ಗವೆಂದರೆ ದೇಶದ ಅಭಿವೃದ್ಧಿಗೆ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಎಂದು ಕರೆ ನೀಡಿದರು. ಅದೇ ರೀತಿಯಾಗಿ ಶಾಲೆಯ ಆಡಳಿತಾಧಿಕಾರಿಗಳಾದ ಸಿದ್ಧಾನಂದ ಬಡೂರು ಸರ್ ಅವರು ಮತ್ತು ಮಾತನಾಡಿ ಸ್ವಾತಂತ್ರ್ಯದ ಬೆಲೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಯುವಜನತೆಯ ಜವಾಬ್ದಾರಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ದೇಶಭಕ್ತಿ ಗೀತೆಗಳು, ಭಾಷಣಗಳು, ಗಾಯನ ಮತ್ತು ನೃತ್ಯ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿದವು, ಪುಟಾಣಿ ಹೆಜ್ಜೆಗಳಲ್ಲಿ ಮೂಡಿದ ನೃತ್ಯ, ಮಧುರ ಸ್ವರಗಳಲ್ಲಿ ಮೊಳಗಿದ ದೇಶಭಕ್ತಿ ಗೀತೆಗಳು ಹಾಗೂ ಉತ್ಸಾಹಭರಿತ ಭಾಷಣಗಳು ಇಡೀ ವಾತಾವರಣವನ್ನು ರಾಷ್ಟ್ರಪ್ರೇಮದ ಅಲೆಯಲ್ಲಿ ತೇಲಿಸಿದವು. ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಲಾದ ಗಾಯನ, ಭಾಷಣ ಹಾಗೂ ಪ್ರಬಂಧ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕವಿತಾ ಬೊಮ್ಮಣ್ಣನವರು ನಿರೂಪಿಸಿದರು. ಸಂಜೀವ ದಾವಣಿ ಸ್ವಾಗತಿಸಿದರು. ಸ್ವಾತಿ ಕಟ್ಟಿಮನಿ ಬಹುಮಾನ ವಿತರಣೆ ನಡೆಸಿಕೊಟ್ಟರು ಹಾಗೂ ಲಕ್ಷ್ಮಿ ಶಹಾಬಾದಿ ವಂದಿಸಿದರು.

Tags:

error: Content is protected !!