ಕಾಗವಾಡ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಮಾಜಿ ಸೈನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.


ಶನಿವಾರ ಬೆಳಿಗ್ಗೆ ತಹಸಿಲ್ದಾರ್ ರವೀಂದ್ರ ಹಾದಿಮನಿ ಅವರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು. ಕಾಗವಾಡದ ಶಿವಾನಂದ ಮಹಾವಿದ್ಯಾಲಯ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ, ಬಾಬನಗೌಡ ಕನ್ನಡ ಮಾಧ್ಯಮ ಶಾಲೆ ಹಾಗೂ ಸರ್ಕಾರಿ ಕನ್ನಡ, ಮರಾಠಿ ಮತ್ತು ಉರ್ದು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಕಾಗವಾಡದ ‘ದಾದಾರಿ ಫೌಂಡೇಶನ್’ ಅಧ್ಯಕ್ಷ ಜ್ಯೋತಿಕುಮಾರ್ ಪಾಟೀಲ್ ಹಾಗೂ ಸಂಸ್ಥೆಯ ಸದಸ್ಯರು ಶೈಕ್ಷಣಿಕ ಸಾಹಿತ್ಯವನ್ನು ಬಹುಮಾನವಾಗಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ವೀರಣ್ಣ ವಾಲಿ, ಬಿಇಒ ಚೆನ್ನಿಂಗರಾಮ, ಪ್ರಾಚಾರ್ಯ ಎಸ್.ಪಿ.ಟಿ. ತಳವಾರ್, ಸಿಡಿಪಿಒ ಸಂಜೀವಕುಮಾರ ಸದಲಗೆ, ಪಿಎಸ್‍ಐ ರಾಘವೇಂದ್ರ ಖೂತ್, ಗ್ರೇಡ್-2 ತಹಸಿಲ್ದಾರ್ ರಶ್ಮಿ ಜಕಾತೆ, ಜ್ಯೋತಿಕುಮಾರ್ ಪಾಟೀಲ್ ಸೇರಿದಂತೆ ಮಾಜಿ ಸೈನಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೈನಿಕ ಭವನ ಉದ್ಘಾಟನೆ:
ಕಾಗವಾಡದ ವೀರ ಮಾಜಿ ಸೈನಿಕರ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಮಾಜಿ ಶಾಸಕ ಮೋಹನರಾವ್ ಶಹಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮಾಜಿ ಸೈನಿಕರು ಹಾಗೂ ವೀರಮಾತೆಯರ ಉಪಸ್ಥಿತಿಯಲ್ಲಿ ನೂತನ ‘ಸೈನಿಕ ಭವನ’ ಕಟ್ಟಡದ ಉದ್ಘಾಟನೆ ನೆರವೇರಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರದ ಗುರುದೇವ ಆಶ್ರಮದ ಶಾಂತಗಂಗಾಧರ್ ಜಗದ್ಗುರುಗಳು ವಹಿಸಿದ್ದರು. ಮಾಜಿ ಶಾಸಕ ಮೋಹನರಾವ್ ಶಹಾ ಅವರು ಮಾತನಾಡಿ, ದೇಶಸೇವೆಯಲ್ಲಿ ಕಾಗವಾಡ ಪಟ್ಟಣದ ಸೈನಿಕರ ಪಾತ್ರ ಮತ್ತು ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅರುಣ ಜೋಷಿ ಮಾತನಾಡಿ, “ಕಾಗವಾಡದ ಸೈನಿಕರು ಪಾಕಿಸ್ತಾನ ಹಾಗೂ ಕಾರ್ಗಿಲ್ ಯುದ್ಧ, ಶ್ರೀಲಂಕಾದ ಶಾಂತಿ ಸೇನೆ ಮತ್ತು ಕಾಶ್ಮೀರದ ವಿವಿಧ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸೇವೆಯಿಂದ ನಿವೃತ್ತರಾದ ಮೇಲೆಯೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಿ ದೇಶಸೇವೆಗೆ ನೀಡಿದ್ದಾರೆ. ಶ್ರೀಲಂಕಾದ ಶಾಂತಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಹುತಾತ್ಮರಾದ ಯುವಕ ರವೀಂದ್ರ ಕೋಳಿ ಅವರ ಕುಟುಂಬಕ್ಕೆ ಬಂದ 4 ಲಕ್ಷ ರೂ. ಸಾನುಗ್ರಹ ಅನುದಾನವನ್ನು ಅವರ ಪೋಷಕರು ವಿಠ್ಠಲ ಮಂದಿರದ ಕಟ್ಟಡಕ್ಕಾಗಿ ದಾನವಾಗಿ ನೀಡಿದ್ದಾರೆ. ಇಲ್ಲಿಯ ಸೈನಿಕರ ಸೇವೆ ಅತ್ಯಂತ ಮಾದರಿಯಾಗಿದೆ” ಎಂದರು.
ಮಾಜಿ ಸೈನಿಕ ಸುಬೇದಾರ್ ಇರಗೌಡ ಪಾಟೀಲ್ ಮಾತನಾಡಿ, “ಕಾಗವಾಡದ ಸೈನಿಕರು ದೇಶದ ಗಡಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ನಾವು ನಿವೃತ್ತರಾಗಿದ್ದರೂ ನಮ್ಮ ಮಕ್ಕಳನ್ನೂ ದೇಶಸೇವೆಗೆ ಸೈನಿಕರನ್ನಾಗಿ ಮಾಡಿದ್ದೇವೆ. ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸದಾ ಸಿದ್ಧ” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಚೌಗುಲೆ, ಪಟ್ಟಣ ಪಂಚಾಯಿತಿ ಸದಸ್ಯ ಪ್ರಕಾಶ್ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಕಾಕಾ ಪಾಟೀಲ್, ನಿವೃತ್ತ ಪ್ರಾಚಾರ್ಯ ಬಿ.ಜೆ. ಪಾಟೀಲ್, ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಅರುಣ್ ಪರಾಂಡೆ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಭೀಮರಾವ ಖಣಾಯಿ, ಉಪಾಧ್ಯಕ್ಷ ಶಿವಪ್ಪಾ ಚೌಗುಲೆ, ಮಾಜಿ ಸೈನಿಕರು ಹಾಗೂ ವೀರಮಾತೆಯರು ಭಾಗವಹಿಸಿದ್ದರು.
ಶೇಡಬಾಳ ಹಾಗೂ ಇತರ ಗ್ರಾಮಗಳಲ್ಲಿ ಆಚರಣೆ:
ಶೇಡಬಾಳ ಸ್ಟೇಷನ್ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಸುರೇಶ್ ಚೌಹ್ವಾಣ್ ಧ್ವಜಾರೋಹಣ ನೆರವೇರಿಸಿದರು. ಸಾರ್ವಜನಿಕ ಧ್ವಜಾರೋಹಣವನ್ನು ಪುಣೆ ಉದ್ಯಮಿ ಅರುಣ ರಾವಣ ನೆರವೇರಿಸಿದರು. ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲೂ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ಪದ್ಮಾವತಿ ಮಹಿಳಾ ಮಂಡಳದ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಸುರೇಶ್ ಚೌಹ್ವಾಣ್ ಅವರು ಶಾಲೆಗೆ ಪ್ರಿಂಟರ್ ದಾನವಾಗಿ ನೀಡಿದರು. ಈ ವೇಳೆ ಉಭಯ ಶಾಲೆಗಳ ಮುಖ್ಯಾಧ್ಯಾಪಕರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಇದೇ ರೀತಿ ಶೇಡಬಾಳ, ಉಗಾರ, ಶಿರಗುಪ್ಪಿ, ಐನಾಪುರ, ಮೋಳೆ ಮತ್ತು ಮಂಗಸುಳಿ ಗ್ರಾಮಗಳ ಗ್ರಾಮ ಪಂಚಾಯಿತಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಶಾಲೆಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ಹಾಗೂ ವಿವಿಧ ಸಂಭ್ರಮದ ಕಾರ್ಯಕ್ರಮಗಳು ನೆರವೇರಿದವು.
ಸುಕುಮಾರ್ ಬನ್ನುರೆ
ಇನ್ನಾ ನ್ಯೂಸ್, ಕಾಗವಾಡ
