Vijaypura

ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ನೀಡಿದರೆ ದೇಶದ ಸೈನಿಕರು ಸ್ವಾತಂತ್ರ್ಯವನ್ನು ಉಳಿಸುತ್ತಿದ್ದಾರೆ; ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಸಂಭ್ರಮಾಚರಣೆ

Share

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಎಷ್ಟು ಜನರು ಪ್ರಾಣ ತೆತ್ತಿದ್ದಾರೋ ಆ ಸ್ವಾತಂತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ವೀರ ಯೋದರು ಸಹ ಪ್ರಾಣ ನೀಡಿದ್ದಾರೆ. ಈರ್ವರ ತ್ಯಾಗ ಹಾಗೂ ಬಲಿದಾನದ ಫಲವಾಗಿ ಇಂದು ಭಾರತದಲ್ಲಿ ನಾವೆಲ್ಲ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂದು ಭೂಸೇನೆಯ ನಿವೃತ್ತ ಸುಬೇದಾರ ಮೇಜರ್ ಗಿರಿಮಲ್ಲೇಶ ಬಿ.ಜಿ ಹೇಳಿದರು.

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 80 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು; ಭಾರತ ದೇಶಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಪ್ಲಾಸಿ ಕದನದ ನಂತರ ದೇಶವನ್ನು ಆಳುವುದಕ್ಕೆ ಮುಂದಾದರು. ಅಲ್ಲಿಂದ ಪ್ರಾರಂಭಗೊಂಡು 1947ರ ವರೆಗೆ ನಡೆದ ಅನೇಕ ಹೋರಾಟ ಹಾಗೂ ತ್ಯಾಗ ಬಲಿದಾನಗಳ ಫಲವಾಗಿ ಈ ಸ್ವಾತಂತ್ರ್ಯ ಲಭಿಸಿದೆ. ಇಂದು ಭಾರತ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದರೂ ಸಹ ಸುತ್ತಮುತ್ತಲೂ ಶತ್ರುಗಳು ನಮ್ಮನ್ನು ಹಿಂದೆ ಎಳೆಯುವುದಕ್ಕೆ ಹೊಂಚು ಹಾಕುತ್ತಿದ್ದಾರೆ. ಅವರನ್ನು ಹತ್ತಿಕ್ಕುವ ಕಾರ್ಯವನ್ನು ಭಾರತೀಯ ಸೈನ್ಯ ಮಾಡುತ್ತಿದ್ದು ಯುವಕರು ಈ ದೇಶದ ವಿಚಾರಕ್ಕೆ ಬಂದಾಗ ದೇಶವೇ ಮೊದಲು ಮಿಕ್ಕಿದ್ದೆಲ್ಲ ನಂತರ ಎನ್ನುವ ಮಟ್ಟದಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜಗತ್ತಿನಲ್ಲಿಯೇ ಭಾರತ ಮತ್ತಷ್ಟು ಬಲಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತದೆ ಎಂದು ಹೇಳಿದರು. ನಾನು ಸಹ ಹತ್ತಾರು ಆಪರೇಷನ್‍ಗಳಲ್ಲಿ ಭಾಗವಹಿಸಿ ಈ ದೇಶವನ್ನು ಕಾಯುವುದಕ್ಕಾಗಿ ಈ ದೇಶದ ಅಸ್ಮಿತೆಗಾಗಿ ಹೋರಾಟ ಮಾಡಿದ್ದು ಭಾರತ ದೇಶದಲ್ಲಿ ಜನಿಸಿದಕ್ಕೆ ಧನ್ಯವಾಯಿತು ಎನ್ನುವ ಭಾವ ನನ್ನಲ್ಲಿ ಮನೆ ಮಾಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಪಿ ಸಾಳೆ; ಒಂದು ಕಾಲದಲ್ಲಿ ಇಡೀ ಜಗತ್ತಿಗೆ ಜ್ಞಾನದ ಹಸಿವನ್ನು ನೀಗಿಸಿ ವಿಶ್ವಗುರುವಾಗಿದ್ದ ಭಾರತ ತದನಂತರದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಸಂಕಷ್ಟದ ಹಾದಿಯಲ್ಲಿ ಸಾಗಿತ್ತು. ತದನಂತರದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ದೊರಿಕಿಸಿ ಕೊಡುವಲ್ಲಿ ಯಶಸ್ವಿಯಾದರು. ಅಂದಿನಿಂದ ಇಂದಿನವರೆಗೆ ಭಾರತ ಮೈಗೊಡವಿ ಎದ್ದುನಿಲ್ಲುವಲ್ಲಿ ಪಟ್ಟಂತ ಕಷ್ಟ ಅಷ್ಟಿಷ್ಟಲ್ಲ. ಆದರೂ ಛಲದಂಕ ಮಲ್ಲನಂತೆ ಸೆಟೆದು ನಿಂತ ಭಾರತ ಮತ್ತೊಮ್ಮೆ ವಿಶ್ವಗುರುವಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ವಿಕಸಿತ ಭಾರತದ ಕನಸನ್ನು ನನಸು ಮಾಡುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತ ಇನ್ನೂ ಎತ್ತರೆತ್ತರಕ್ಕೆ ಬೆಳೆಯುವುದಕ್ಕೆ ನಮ್ಮ ಯುವಶಕ್ತಿ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಅಗ್ನಿವೀರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಭಾರತೀಯ ವಾಯು ಪಡೆಯ ಸೇವೆಗೆ ನಿಯೋಜನೆಗೊಂಡ ವಿದ್ಯಾರ್ಥಿನಿ ಐಶ್ವರ್ಯ ಮದಭಾವಿ ಸನ್ಮಾನ ಸ್ವೀಕರಿಸಿ ಮಾತನಾಡಿ; ನಾನು ಇದೇ ಕಾಲೇಜಿನಲ್ಲಿ ಕಲಿತು ಇಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡಿರುವುದು ನನಗೆ ಹೆಮ್ಮೆ ತಂದಿದೆ. ನನ್ನಂತೆ ನೀವು ಸಹ ನಮ್ಮ ದೇಶಕ್ಕಾಗಿ ದುಡಿಯವುದಕ್ಕೆ ನಿರ್ಧಾರ ಮಾಡಿ ಹೆಜ್ಜೆ ಹಾಕಿದರೆ ತಮ್ಮ ಭವಿಷ್ಯವು ಕೂಡ ಉತ್ತಮವಾಗಿರುತ್ತದೆ ಎಂದು ಹೇಳಿದಳು.
ಪ್ರಾಂಶುಪಾಲ ಮಂಜುನಾಥ ಜುನಗೊಂಡ, ವಿದ್ಯಾರ್ಥಿಗಳಾದ ರಫೀಕ್ ಮೋರಟಿಗಿ, ಅಪೇಕ್ಷಾ ಹುಗ್ಗಿ, ಅಶ್ವಿನಿ ಮೋಟೇಕರ್ ಮಾತನಾಡಿದರು. ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಉಪಸ್ಥಿತರಿದ್ದರು. ವೈಶಾಲಿ ಪೂಜಾರಿ, ಸಿಂಧೂರಾಣಿ ಸ್ಥಾವರಮಠ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು, ಆಂಗ್ಲ ವಿಭಾಗದ ಮುಖ್ಯಸ್ಥೆ ಶ್ರದ್ಧಾ ಜಾಧವ ನಿರೂಪಿಸಿ ವಂದಿಸಿದರು.

Tags:

error: Content is protected !!