Vijaypura

ಬ್ರಿಟಿಷರ ವಿರುದ್ಧ ಬಂದೂಕು ಹಿಡಿದ ಇಂಚಗೇರಿ ಮಠಾಧೀಶ..! 20 ಸಾವಿರ ದೇಶ ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ಮಾಧವಾನಂದ ಪ್ರಭುಜಿ..!

Share

ಬ್ರಿಟಿಷರ ವಿರುದ್ಧ ಸಿಡಿದೆದ್ದು ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು. ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ಅಪರೂಪದ ಮಠಾಧೀಶರು.. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿ, ಜೈಲು ವಾಸ ಅನುಭವಿಸಿದ್ದ ಮಹಾದೇವರು, ಸಮಾಜದಲ್ಲಿನ ಜಾತಿ-ಧರ್ಮದ ಬೇಧವನ್ನೂ ತೊಡೆದುಹಾಕಲು ಶ್ರಮಿಸಿದ್ದರು.. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮಾಧವಾನಂದ ಪ್ರಭುಜಿಗಳ ಪಾತ್ರ ಮತ್ತು ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಈ ವಿಶೇಷ ವರದಿ..

ಇವರು ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು, ಮಠಾಧೀಶರಾಗಿದ್ದರೂ, ಸ್ವಾತಂತ್ರ್ಯ ಹೋರಾಟವೇ ತಮ್ಮ ಜೀವನದ ಪ್ರಮುಖ ಧ್ಯೇಯವನ್ನಾಗಿಸಿಕೊಂಡಿದ್ದವರು.. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠದ ಸಾವಿರಾರು ಭಕ್ತರನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸಂಘಟಿಸಿದ ಹೆಗ್ಗಳಿಕೆ ಇವರದ್ದು..
ಎಳೆಯ ವಯಸ್ಸಿನಲ್ಲೇ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ್ದ ಮಾಧವಾನಂದ ಪ್ರಭುಜಿಗಳು, ತಮ್ಮ ಅನುಯಾಯಿಗಳೊಂದಿಗೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.. ಅಂಚೆ ಕಚೇರಿ, ನಾಡ ಕಚೇರಿಗಳಿಗೆ ಬೆಂಕಿ ಹಚ್ಚುವುದು, ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನು ಕಿತ್ತಹಾಕುವುದು ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು.. ಬ್ರಿಟಿಷ್ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನು ದೋಚಿದ ಆರೋಪವೂ ಇವರ ಮೇಲಿತ್ತು.. ಈ ಹೋರಾಟಗಳ ಹಿನ್ನೆಲೆಯಲ್ಲಿ ಮಾಧವಾನಂದ ಪ್ರಭುಜಿಗಳು ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು..

ಇನ್ನೂ ಮಹಾತ್ಮಾ ಗಾಂಧೀಜಿ ಹಾಗೂ ಸುಭಾಷಚಂದ್ರ ಬೋಸ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆನ್ನಲಾದ ಮಾಧವಾನಂದ ಪ್ರಭುಜಿಗಳು, ಉಪ್ಪಿನ ಸತ್ಯಾಗ್ರಹ, ಚಲೇ ಜಾವ್ ಚಳುವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ತಮ್ಮ ಅನುಯಾಯಿಗಳೊಂದಿಗೆ ಪಾಲ್ಗೊಂಡಿದ್ದರು.. ಇವರ ಹೋರಾಟದ ತೀವ್ರತೆ ಕಂಡ ಬ್ರಿಟಿಷ್ ಸರ್ಕಾರ ಮಾಧವಾನಂದ ಪ್ರಭುಜಿಗಳನ್ನು ಕಂಡಲ್ಲಿ ಗುಂಡಿಕ್ಕುವಂತೆ ಆದೇಶಿಸಿತ್ತು ಎನ್ನಲಾಗಿದೆ.. ಗೋಕಾಕ್ ಬಳಿ ಬ್ರಿಟಿಷ್ ಪೊಲೀಸರು ಇವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯೂ ಮಠದ ಇತಿಹಾಸದಲ್ಲಿ ದಾಖಲಾಗಿದೆ.. ಸ್ವಾತಂತ್ರ್ಯ ಹೋರಾಟದ ಜೊತೆಗೆ ಸಾಮಾಜಿಕ ಸಮಾನತೆಗೂ ಮಾಧವಾನಂದ ಪ್ರಭುಜಿಗಳು ಒತ್ತು ನೀಡಿದ್ದರು.. ಜಾತಿ-ಧರ್ಮದ ಬೇಧವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಂತರ್ಜಾತಿ ಹಾಗೂ ಅಂತರ್‌ಧರ್ಮೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಿದ್ದರು ಎನ್ನಲಾಗಿದೆ.. ತಮ್ಮ ಮೊಮ್ಮಗಳನ್ನೇ ಮುಸ್ಲಿಂ ಸಮುದಾಯದ ಯುವಕನಿಗೆ ವಿವಾಹ ಮಾಡಿಕೊಟ್ಟು, ಜಾತ್ಯತೀತತೆಯ ಸಂದೇಶ ಸಾರಿದ್ದರು.. ಇಂತಹ ರಾಷ್ಟ್ರಪ್ರೇಮಿ, ಸಮಾಜ ಸುಧಾರಕ ಮಾಧವಾನಂದ ಪ್ರಭುಜಿಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂಚಗೇರಿ ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ..

ಬ್ರಿಟಿಷರ ವಿರುದ್ಧದ ಹೋರಾಟದಿಂದ ಹಿಡಿದು ಜಾತ್ಯತೀತ ಸಮಾಜ ನಿರ್ಮಾಣದವರೆಗೆ.. ತಮ್ಮ ಬದುಕನ್ನೇ ದೇಶ ಮತ್ತು ಸಮಾಜಕ್ಕೆ ಅರ್ಪಿಸಿಕೊಂಡಿದ್ದ ಮಾಧವಾನಂದ ಪ್ರಭುಜಿಗಳ ಸೇವೆ ಇಂದಿಗೂ ಅವರ ಅನುಯಾಯಿಗಳಿಗೆ ಪ್ರೇರಣೆಯಾಗಿದೆ.. ಇಂಚಗೇರಿ ಮಠದ ಈ ಮಹಾನ್ ಮಠಾಧೀಶರ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರ ಹೋರಾಟದ ಹೆಜ್ಜೆಗಳನ್ನು ನೆನೆಯಲಾಗುತ್ತಿದೆ..

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.

Tags:

error: Content is protected !!