ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರಾಗಿದ್ದ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ಜಮೀರ್ ಪರ ಬ್ಯಾಟ್ ಬೀಸಿರುವ ಸಚಿವ ಎಂ.ಬಿ. ಪಾಟೀಲ್, ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್ ಅವರು ಧ್ವಜಾರೋಹಣಕ್ಕೆ ಏಕೆ ಗೈರಾಗಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದರು. ಅವರಿಗೆ ಅನಿವಾರ್ಯ ಕಾರಣ ವಿದ್ದಿರಬಹುದು, ಆ ಕಾರಣವನ್ನು ಬಹುಶಃ ಮುಖ್ಯಮಂತ್ರಿ ಅವರ ಗಮನಕ್ಕೂ ತಂದಿರಬಹುದು ಎಂದು ಹೇಳಿದರು.
ಹೀಗಾಗಿ ಜಮೀರ್ ಗೈರಾಗಿರುವ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಜಮೀರ್ ಅಹ್ಮದ್ ಅವರ ರಾಷ್ಟ್ರಾಭಿಮಾನವನ್ನು ಯಾರೂ ಪ್ರಶ್ನಿಸುವಂತಿಲ್ಲ. ದೇಶಕ್ಕಾಗಿ ಯುದ್ಧಕ್ಕೆ ಹೋಗಲು ಕೂಡ ಸಿದ್ಧ ಎಂದು ಹೇಳಿರುವ ವ್ಯಕ್ತಿ ಅವರು ಎಂದು ಎಂ.ಬಿ. ಪಾಟೀಲ್ ಸಮರ್ಥಿಸಿಕೊಂಡರು. ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಎಂ.ಬಿ. ಪಾಟೀಲ್, ಬಿಜೆಪಿಯವರ ಕೆಲಸವೇ ವಿರೋಧ ಮಾಡುವುದು ಎಂದು ಟೀಕಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಯಾರಾದರೂ ಭಾಗವಹಿಸಿದ್ದಾರೆಯೇ? ಒಬ್ಬೇ ಒಬ್ಬ ಬಿಜೆಪಿ ನಾಯಕರ ಹೆಸರನ್ನು ತೋರಿಸಿ ಎಂದು ಸವಾಲು ಹಾಕಿದರು. ಇಂದು ಭಾರತದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಧರ್ಮದವರ ಸ್ವಾತಂತ್ರ್ಯ ಹೋರಾಟದ ಕೊಡುಗೆ ಇದೆ. ಆದರೆ ಬಿಜೆಪಿಯ ಒಬ್ಬರ ಹೆಸರಾದರೂ ಅಲ್ಲಿ ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ
‘ಹರ್ ಘರ್ ತಿರಂಗಾ’ ಎಂದು ಹೇಳುವ ಬಿಜೆಪಿಯವರು ನಾಗಪುರದ ಆರ್ಎಸ್ಎಸ್ ಹೆಡ್ಕ್ವಾರ್ಟರ್ ಮೇಲೆ ತಿರಂಗಾ ಏಕೆ ಹಾರಿಸಲಿಲ್ಲ ಎಂದು ಪ್ರಶ್ನಿಸಿದ ಎಂ.ಬಿ. ಪಾಟೀಲ್, ಬಿಜೆಪಿಯವರಿಂದ ನಾವು ರಾಷ್ಟ್ರಾಭಿಮಾನ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
