ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರಿನ ಎಸ್.ಎನ್.ಡಿ. ಶಾಲೆಯಲ್ಲಿ ಸೈನಿಕರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಮಕ್ಕಳಲ್ಲಿ ದೇಶಭಕ್ತಿ ಹಾಗೂ ‘ನಾನೂ ಸೈನಿಕನಾಗಬೇಕು’ ಎಂಬ ಸ್ಫೂರ್ತಿ ಮೂಡಿಸುವ ಉದ್ದೇಶದಿಂದ ಜಟ್ಟಗಿ ಗ್ರಾಮದ ಸೈನಿಕ ಬಾಪುಗೌಡ ಗೌಡರ ಹಾಗೂ ಹುಲ್ಲೂರು ಗ್ರಾಮದ ಸೈನಿಕ ಶ್ರೀಶೈಲ ಜಾಲಾಪೂರ ಅವರನ್ನು ವಿಶೇಷವಾಗಿ ಆಹ್ವಾನಿಸಲಾಯಿತು. ಸೈನಿಕರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆತಂದು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸೈನಿಕರಿಗೆ ನೀಡಿದ ಗೌರವವನ್ನು ಕಂಡ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಸೈನಿಕರ ಸಮ್ಮುಖದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಸೇವೆ ಹಾಗೂ ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು.
ನಂತರ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹಾಗೂ ದೇಶಭಕ್ತಿಯ ಕುರಿತು ತಮ್ಮ ಮುಗ್ಧ ಮಾತುಗಳಲ್ಲಿ ಭಾಷಣ ಮಾಡಿದರು. ಪುಟ್ಟ ಮಕ್ಕಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ಮಕ್ಕಳ ಪ್ರತಿಭೆ ಹಾಗೂ ದೇಶಭಕ್ತಿಯ ಅಭಿವ್ಯಕ್ತಿ ನೆರೆದವರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೈನಿಕ ಬಾಪುಗೌಡ ಗೌಡರ, “ನಾನು ಸೈನ್ಯಕ್ಕೆ ಸೇರಿದ್ದು ಕೇವಲ ನೌಕರಿಗಾಗಿ ಅಲ್ಲ; ದೇಶಸೇವೆ ಮಾಡುವ ಉದ್ದೇಶದಿಂದ. ಪರಮವೀರ ಪ್ರಶಸ್ತಿ ಪಡೆಯುವ ಗುರಿಯೊಂದಿಗೆ ಹಾಗೂ ದೇಶದ್ರೋಹಿಗಳನ್ನು ಮಟ್ಟಹಾಕುವ ಸಂಕಲ್ಪದಿಂದ ಸೈನ್ಯ ಸೇರಿದ್ದೇನೆ. ದೇಶದ ಮಾತೆಯ ಸೇವೆಯಲ್ಲಿ ಇಬ್ಬರು ದೇಶದ್ರೋಹಿಗಳನ್ನು ಮಟ್ಟಹಾಕಿದ್ದೇನೆ” ಎಂದು ತಮ್ಮ ಅನುಭವ ಹಂಚಿಕೊಂಡರು.
ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕೊಪ್ಪ ಮಾತನಾಡಿ, “ಪವಿತ್ರವಾದ ರಾಷ್ಟ್ರಧ್ವಜವನ್ನು ಕಳೆದ 14 ವರ್ಷಗಳಿಂದ ಸೈನಿಕರ ಅಮೃತ ಹಸ್ತದಿಂದಲೇ ಧ್ವಜಾರೋಹಣ ಮಾಡಿಸುತ್ತಿದ್ದೇನೆ. ನಾವು ನೆಮ್ಮದಿಯಿಂದ ಬದುಕಬೇಕಾದರೆ, ತಮ್ಮ ನೆಮ್ಮದಿಯನ್ನು ದೇಶಕ್ಕಾಗಿ ಅರ್ಪಿಸುವ ಸೈನಿಕರೇ ನಿಜವಾದ ದೊಡ್ಡವರು” ಎಂದು ಹೇಳಿದರು. ಅವರ ಮಾತುಗಳನ್ನು ಕೇಳುತ್ತಿದ್ದ ವೇಳೆ ನೆರೆದವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಚೈತ್ರಾ ನೆರವೇರಿಸಿದರು. ನಿರೂಪಣೆಯನ್ನು ಭಾಗ್ಯಶ್ರೀ ಕಂಬಾರ ನಿರ್ವಹಿಸಿದರು. ವಂದನಾರ್ಪಣೆಯನ್ನು ದಶರಥ ನೆರವೇರಿಸಿದರು.
ಸೈನಿಕರ ಸಮ್ಮುಖದಲ್ಲಿ ನಡೆದ ಈ ವಿಶಿಷ್ಟ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಸೇವೆ ಹಾಗೂ ಸೈನಿಕರ ಬಗ್ಗೆ ಗೌರವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
