ರಾಜ್ಯದಲ್ಲಿ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದರೂ ಸರ್ಕಾರ ಬರ ಘೋಷಣೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ತಕ್ಷಣವೇ ಸ್ಪಂದಿಸದಿದ್ದರೆ ಸದನದ ಒಳಗೂ ಮತ್ತು ಹೊರಗೂ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ, ರಾಮದುರ್ಗ ಮತ್ತು ಕಟಕೋಳ ಸೇರಿದಂತೆ ಹಲವು ಭಾಗಗಳಲ್ಲಿ ಬೆಳೆ ಹಾನಿ ವೀಕ್ಷಿಸಿದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರೈತರ ಪರಿಸ್ಥಿತಿ ತೀರಾ ಆಶಾದಾಯಕವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹೆಸರು, ಹತ್ತಿ, ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಹಿಂದೆ 8 ರಿಂದ 12 ಕ್ವಿಂಟಲ್ ಬೆಳೆಯುತ್ತಿದ್ದ ರೈತರಿಗೆ ಈ ಬಾರಿ 12 ಕೆಜಿಯೂ ಸಿಗುತ್ತಿಲ್ಲ. ಕುಡಿಯುವ ನೀರಿಲ್ಲದೆ ರಾಮದುರ್ಗದಲ್ಲಿ ಕುರಿಗಳು ಪರದಾಡುತ್ತಿವೆ. ಚಂದರಗಿ ಕೆರೆ ತುಂಬಿಸುವ ಯೋಜನೆ ಮತ್ತು ಸಾಲಾಪುರ ಏತ ನೀರಾವರಿ ಯೋಜನೆಗಳು ಕಾರ್ಯಾರಂಭ ಮಾಡದೆ 60ಕ್ಕೂ ಹೆಚ್ಚು ಹಳ್ಳಿಗಳಿಗೆ ತೊಂದರೆಯಾಗಿದೆ. ರೈತರು ವಿಷ ಕುಡಿಯುವ ಹಂತಕ್ಕೆ ತಲುಪಿದ್ದರೂ ಸಿಎಂ ಸಿದ್ದರಾಮಯ್ಯ ಅವರು ರೈತರ ಹೊಲಗಳಿಗೆ ತೆರಳದೆ ಅಸಮಾಧಾನಿತ ಶಾಸಕರ ಮನೆಗೆ ಹೋಗುತ್ತಿದ್ದಾರೆ ಎಂದು ರವಿಕುಮಾರ್ ಟೀಕಿಸಿದರು.
ಸರ್ಕಾರ ಕೂಡಲೇ ಬರ ಘೋಷಣೆ ಮಾಡಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಹಾಗೂ ಲಾವಣಿ ಪಡೆದ ರೈತರ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು. ಸರ್ಕಾರದ ಸಚಿವ ಸಂಪುಟದಲ್ಲಿ ದಲ್ಲಾಳಿ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ರೈತರ ಪರವಾಗಿ ಸದನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಇದೇ ವೇಳೆ ಜೆಡಿಎಸ್ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೊರಗುಳಿದ ವಿಚಾರಕ್ಕೆ ಸ್ಪಷ್ಟನೆ ನೀಡಿದ ರವಿಕುಮಾರ್, ಪೂರ್ವನಿರ್ಧರಿತ ಕಾರ್ಯಕ್ರಮದಂತೆ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮುಂಚಿತವಾಗಿಯೇ ಚರ್ಚಿಸಿ ವಿಜಯೇಂದ್ರ ಅವರು ಶಿಕಾರಿಪುರಕ್ಕೆ ತೆರಳಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಶಾಸಕ ಅಭಯ್ ಪಾಟೀಲ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
