Ballari

ಬಳ್ಳಾರಿಗೆ ಕುಖ್ಯಾತಿ ತಂದಿದ್ದೇ ಶ್ರೀರಾಮುಲು, ರೆಡ್ಡಿ ಸಹೋದರರು: ಸಚಿವ ಈಶ್ವರ ಖಂಡ್ರೆ

Share

ರಾಜ್ಯದಲ್ಲಿ ಸಚಿವರಿಗೆ ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಕೊತ್ವಾಲ್ ಶಿಷ್ಯಂದಿರ ಆಡಳಿತ’ ಎಂದಿದ್ದ ಬಿ. ಶ್ರೀರಾಮುಲು ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಡಕ್ ತಿರುಗೇಟು ನೀಡಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಖಾತೆ ಹಂಚಿಕೆ ಪ್ರಕ್ರಿಯೆ ಶೀಘ್ರದಲ್ಲೇ ಸುಗಮವಾಗಿ ನಡೆಯಲಿದೆ ಎಂದರು. ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, “ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ಕಂಡು ಬಿಜೆಪಿ ನಾಯಕರು ಹತಾಶೆಯಿಂದ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಬಳ್ಳಾರಿಗೆ ಕುಖ್ಯಾತಿ ತಂದು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಮಾಡಿದ್ದೇ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು. ಇವರಿಗೆ ಮಾನಮರ್ಯಾದೆ ಇದೆಯಾ?” ಎಂದು ಖಾರವಾಗಿ ಪ್ರಶ್ನಿಸಿದರು. 2028 ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರು ಹಾಗೂ ಎಲ್ಲಾ ಸಮುದಾಯದವರಿಗೂ ಸೂಕ್ತ ಪ್ರಾತಿನಿಧ್ಯ ಮತ್ತು ಸಚಿವ ಸ್ಥಾನ ಸಿಗಲಿದೆ ಎಂದರು.

ಇದೇ ವೇಳೆ ಬಿ. ನಾಗೇಂದ್ರ ರಾಜೀನಾಮೆ ವಿಚಾರದ ಕುರಿತು ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖಂಡ್ರೆ, ಲೋಕಸಭೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಮತ್ತು ಪೊಲೀಸ್ ದುರ್ಬಳಕೆಯನ್ನು ಖಂಡಿಸಿದರು. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದಿಂದಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತಾಯಿತು. ಪೆಲೆಟ್ ದಾಳಿ ಹಾಗೂ ಹಿಂಸಾಚಾರ ನಡೆಸಿದವರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿ ಎಂದು ಸವಾಲೆಸೆದ ಅವರು, ಈ ಘಟನೆಯ ನೇರ ಹೊಣೆ ಹೊತ್ತು ಕೇಂದ್ರ ಗೃಹ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

Tags:

error: Content is protected !!