Kagawad

ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ‘ಅತ್ಯುತ್ತಮ ಸಕ್ಕರೆ ಕಾರ್ಖಾನೆ’ ಪ್ರಶಸ್ತಿ ಗೌರವ

Share

ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳ ಹೆಸರಾಂತ ಸಂಶೋಧನಾ ಕೇಂದ್ರವಾಗಿರುವ ಮಹಾರಾಷ್ಟ್ರದ ಪುಣೆ ಡೆಕ್ಕನ್ ಶುಗರ್ ಟೆಕ್ನಾಲಜಿ ಸಂಸ್ಥೆಯ ವತಿಯಿಂದ, ಕೆಂಪವಾಡದ ‘ಅಥಣಿ ಫಾರ್ಮರ್ಸ್ ಶುಗರ್ ವರ್ಕ್ಸ್’ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ‘ಅತ್ಯುತ್ತಮ ಸಕ್ಕರೆ ಕಾರ್ಖಾನೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶನಿವಾರದಂದು ನಡೆದ ಪುಣೆ ಡೆಕ್ಕನ್ ಶುಗರ್ ಟೆಕ್ನಾಲಜಿಯ 71ನೇ ವಾರ್ಷಿಕ ಸಭೆಯಲ್ಲಿ, ಉಗಾರ ಸಕ್ಕರೆ ಕಾರ್ಖಾನೆಯ ಉದ್ಯಮಿ ಸೋಹಾನ ಶಿರಿಗೌಂಕರ್ ಅವರ ಅಧ್ಯಕ್ಷತೆಯಲ್ಲಿ, ಮಾಜಿ ಸಚಿವರು ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರಾದ ಜಯಂತ್ ಪಾಟೀಲ್ ಅವರು ಶ್ರೀಮಂತ ಪಾಟೀಲರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಅಥಣಿ ಫಾರ್ಮರ್ಸ್ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿ 25 ವರ್ಷಗಳು ಗತಿಸಿದ್ದು, ಮಹಾರಾಷ್ಟ್ರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಿ, ಈಗ ಒಟ್ಟು ಐದು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿ ಶ್ರೀಮಂತ ಪಾಟೀಲ್ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿ ವರ್ಷ ಸುಮಾರು 20 ಲಕ್ಷ ಟನ್‌ಗಿಂತಲೂ ಅಧಿಕ ಕಬ್ಬು ನುಡಿಸಿ, ಸಕ್ಕರೆ ಕಾರ್ಖಾನೆಯಲ್ಲಿ ಡಿಸ್ಟಿಲರಿ ಹಾಗೂ ಕೋ-ಜನರೇಷನ್ ಮುಖಾಂತರ ವಿದ್ಯುತ್ ಘಟಕ ಪ್ರಾರಂಭಿಸಿ, ಕಾರ್ಖಾನೆಗೆ ಅಧಿಕ ಉತ್ಪಾದನೆ ಮತ್ತು ಆದಾಯ ತರುವ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

ಅವರ ಮೂವರು ಸುಪುತ್ರರು ಸಕ್ಕರೆ ಕಾರ್ಖಾನೆ ಉದ್ಯಮವನ್ನು ನಿಭಾಯಿಸುತ್ತಿದ್ದು, ಈಗ ಹೆಸರಾಂತ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಶ್ರೀಮಂತ ಪಾಟೀಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

Tags:

error: Content is protected !!