ಕಾಗವಾಡ ತಾಲೂಕಿನ ಉಗಾರ್ ಪಟ್ಟಣದ ಡಾ. ಶಿರಗಾಂವ್ಕರ್ ಶಿಕ್ಷಣ ಸಂಸ್ಥೆಯ ಶ್ರೀಹರಿ ವಿದ್ಯಾಲಯದ ಆದರ್ಶ ಶಿಕ್ಷಕಿ ಅಂಜನಿ ಪವಾರ್ ಹಾಗೂ ಸೂರ್ಯವಂಶಿ ಇವರು 29 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ ನಿಮಿತ್ತ, ಸಂಸ್ಥೆಯ ಮಾಜಿ ಕಾರ್ಯದರ್ಶಿ, ನಿವೃತ್ತ ಪ್ರಧಾನ ಗುರುಗಳು ಹಾಗೂ ಹೆಸರಾಂತ ನಾಟ್ಯ ಕಲಾವಿದ ಅನಂತ ಬೇಡೇಕರ್ ಇವರಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.


ಶನಿವಾರ ಸಂಜೆ ಉಗಾರಿನ ವಿಹಾರ ಸಭಾಭವನದಲ್ಲಿ ಈ ಸನ್ಮಾನ ಸಮಾರಂಭ ನೆರವೇರಿತು. ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾವಳಿಯ ರೆಫ್ರಿ, ತಿರಪುಗಾರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಎಸ್. ಸೂರ್ಯವಂಶಿ ಇವರ ಪತ್ನಿ, ಮರಾಠಿ ಭಾಷೆಯ ಶಿಕ್ಷಕಿ ಅಂಜನಿ ಪವಾರ್ ಮತ್ತು ಸೂರ್ಯವಂಶಿ ಇವರಿಬ್ಬರ ಸನ್ಮಾನ ಸಮಾರಂಭವು ವೈಭವದಿಂದ ನೆರವೇರಿತು.

ಶಿರಗಾಂವ್ಕರ್ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ 88 ವರ್ಷ ವಯಸ್ಸಿನ ಹೆಸರಾಂತ ನಾಟ್ಯ ಕಲಾವಿದ ಅನಂತ ಬೇಡೇಕರ್ ಮಾತನಾಡಿ, “ಶಿಕ್ಷಕ ಸೇವೆ ಇದು ಒಂದು ಈಶ್ವರ ಸೇವೆ. ಹಿರಿಯರ ಆಶೀರ್ವಾದದಿಂದ ದೊರೆತ ಸರಸ್ವತಿ ಸೇವೆ ಇದಾಗಿದ್ದು, ಪ್ರತಿಯೊಬ್ಬರೂ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಎಲ್ಲಾ ಶಿಕ್ಷಣ ಮತ್ತು ಮಾಹಿತಿಯನ್ನು ಧಾರೆಯೆರೆಯಬೇಕು. ಇದನ್ನು ಮಾಡುವಾಗ ನಗುನಗುತ್ತಾ ಜೀವನ ಸಾಗಿಸಿ ಸೇವಾ ಅವಧಿ ಪೂರ್ಣಗೊಳಿಸಿದರೆ ಅವರೇ ಪುಣ್ಯವಂತರು” ಎಂದು ಹೇಳಿ, ಶಿಕ್ಷಕರು ಸೇವೆ ಸಲ್ಲಿಸುವ ಬಗ್ಗೆ ಕೆಲ ಕಿವಿಮಾತುಗಳನ್ನು ಹೇಳಿದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಬೆಳ್ಳಂಕಿ ಮಾತನಾಡಿ, “ಶಿರಗಾಂವ್ಕರ್ ಶಿಕ್ಷಣ ಸಂಸ್ಥೆಯು ಒಂದು ಆದರ್ಶ ಸಂಸ್ಥೆಯಾಗಿದ್ದು, ಇಲ್ಲಿಯ ಅನೇಕ ಹೆಸರಾಂತ ಶಿಕ್ಷಕರು ತಮ್ಮ ಸೇವಾ ಅವಧಿ ಪೂರ್ಣಗೊಳಿಸಿ ನಿವೃತ್ತಿ ಹೊಂದುತ್ತಿರುವುದು ಚಿಂತೆಯ ವಿಷಯವಾಗಿದೆ. ಇಲ್ಲಿಗೆ ಬೋಧನೆಗೆ ಬರುವ ಶಿಕ್ಷಕರು ಹಿರಿಯ ಶಿಕ್ಷಕರ ಆದರ್ಶವನ್ನು ಮೈಗೂಡಿಸಿಕೊಂಡು ಬೋಧನೆ ಮಾಡಿ ಸಂಸ್ಥೆಯ ಆದರ್ಶವನ್ನು ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ಶರದ್ ಸೂರ್ಯವಂಶಿ, ಡಾ. ದೀಪಾಲಿ ಸೂರ್ಯವಂಶಿ, ಮಾಧವಿ ಸೂರ್ಯವಂಶಿ, ಪ್ರಧಾನ ಗುರುಗಳಾದ ಶ್ರೀಮತಿ ಸುಜಾತಾ ದೇಶಪಾಂಡೆ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಮೇಘನಾ ಕುಲಕರ್ಣಿ, ಸಿಬಿಎಸ್‌ಸಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ರೋಷಿಣಿ, ಎಲ್ಲಾ ಶಾಲೆಯ ಶಿಕ್ಷಕರು, ಪ್ರವಚನಕಾರರಾದ ಜ್ಞಾನದೇವ ಮಹಾರಾಜ್, ಅಶೋಕ್ ಮಹಾರಾಜ್, ಸುಭಾಷ್ ಸೇವಾಳೆ ಗುರೂಜಿ, ಜಿ. ಎಸ್. ವಾಠಾರಕರ್, ಬಾಹುಬಲಿ ಭೋಜನವರ್, ಹಾಗೂ ಅನೇಕ ಶಿಕ್ಷಕರು, ಹಿರಿಯರು, ಪಾಲಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಂ. ಡಿ. ಜಾದವ್ ಮತ್ತು ಅಮೃತಾ ಜಾದವ್ ನೆರವೇರಿಸಿದರು.
