hubbali

ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ ಕಿಮ್ಸ್‌ ಅಧ್ಯಯನ ವರದಿ

Share

ಎಲ್ಲಿ ನೋಡಿದರೂ, ಹಾರ್ಟ್ ಅಟ್ಯಾಕ್‌ನ ವಿಷಯವೇ. ಇಷ್ಟು ದಿನ ವಯಸ್ಕರಲ್ಲಿ ಹೆಚ್ಚುತ್ತಿದ್ದ ಹೃದಯಾಘಾತ ಈಗ ಚಿಕ್ಕಮಕ್ಕಳಲ್ಲಿಯೂ ಜಾಸ್ತಿಯಾಗುತ್ತಿದೆ. ಪೋಷಕರೇ ಎಚ್ಚರ ಎಚ್ಚರ..! ದೇಶದಲ್ಲಿಯೇ ಮೊಟ್ಟಮೊದಲ ಕಿಮ್ಸ್‌ನ ಅಧ್ಯಯನದ ವರದಿ ದೇಶವನ್ನೇ ಬೆಚ್ಚಿಬೀಳಿಸುತ್ತಿದೆ.

ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ವಯಸ್ಕರಲ್ಲಿ ಕಾಣುತ್ತಿದ್ದ ಹಾರ್ಟ್ ಅಟ್ಯಾಕ್, ಈಗ ಮಕ್ಕಳಲ್ಲಿ ಹೆಚ್ಚಾಗಿ ಕಾಣುತ್ತಿದೆ. ಹೌದು.. ಹುಬ್ಬಳ್ಳಿ ಕಿಮ್ಸ್ ಬಹುಶಿಸ್ತೀಯ ಸಂಶೋಧನಾ ಘಟಕದಿಂದ ದೇಶದಲ್ಲಿ ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದೆ. ಕರ್ನಾಟಕ ಸೇರಿ ದೇಶಾದ್ಯಂತ ಈ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿದ್ದು, ನೋಡಲ್ ಅಧಿಕಾರಿ ಡಾ. ರಾಮ್ ಕವಲಗುಡ್ಡ ನೇತೃತ್ವದಲ್ಲಿ ಅಧ್ಯಯನ ನಡೆಸಿದ್ದಾರೆ. 13 ರಾಜ್ಯಗಳಲ್ಲಿ 347 ಮಕ್ಕಳ ಪರೀಕ್ಷೆ ನಡೆಸಿ ಅಧ್ಯಯನ ನಡೆಸಲಾಗಿದ್ದು, ಧಾರವಾಡ ಜಿಲ್ಲೆಯ 62 ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆ ಮಾಡಲಾಗಿದೆ. 8 ರಿಂದ 18 ವರ್ಷದ ಮಕ್ಕಳ ಅಧ್ಯಯನದಲ್ಲಿ ಹೆಚ್ಚು ತೂಕವಿರುವ ಮಕ್ಕಳನ್ನು ಆಯ್ಕೆ ಮಾಡಿ ಪರೀಕ್ಷೆ ನಡೆಸಿದ್ದು, ಮಕ್ಕಳ ಎತ್ತರ, ತೂಕ, ರಕ್ತದಲ್ಲಿನ ಕೊಲೆಸ್ಟರಾಲ್ ಪರೀಕ್ಷೆ ಮಾಡಲಾಗಿತ್ತು. ಹೃದಯದಲ್ಲಿನ ಅಪಧಮನಿಯಲ್ಲಿರುವ ಎಂಡೋಥೀಲಿಯಂ ಪರೀಕ್ಷೆ ನಡೆಸಲಾಗಿತ್ತು. ಇಂತಹ ಶೇಕಡಾ 70 ರಷ್ಟು ಮಕ್ಕಳಲ್ಲಿ ಹೃದಯಾಘಾತಕ್ಕೆ ಪೂರಕವಾಗಿರುವ ಅಂಶಗಳು ಕಂಡುಬಂದಿವೆ.

ಇನ್ನೂ ಶೇಕಡಾ 17 ಮಕ್ಕಳಲ್ಲಿ ಎಂಡೋಥೀಲಿಯಂ ಡ್ಯಾಮೇಜ್ ಆಗಿದೆ. ಇದರಿಂದ ಹೃದಯಾಘಾತ ಮಾತ್ರವಲ್ಲದೆ ಕಿಡ್ನಿ ಸೇರಿದಂತೆ ಬಹು ಅಂಗಗಳಿಗೆ ತೊಂದರೆಯಾಗಲಿದ್ದು, ಚಿಕಿತ್ಸೆ ಪಡೆಯದೆ ಬಿಟ್ಟರೆ ಹತ್ತರಿಂದ ಹದಿನೈದು ವರ್ಷಗಳಲ್ಲಿ ಹೃದಯಾಘಾತ, ಕಿಡ್ನಿ ತೊಂದರೆಗೆ ಒಳಗಾಗುತ್ತಾರೆ. ಮಕ್ಕಳಲ್ಲಿ ಬೊಜ್ಜುತನ ಹೆಚ್ಚಾಗಿರುವುದು, ದೈಹಿಕ ಚಟುವಟಿಕೆ ಇಲ್ಲದೆ ಇರುವುದು, ಆಹಾರ ಪದ್ಧತಿ ಸರಿಯಿಲ್ಲದಿರುವುದು, ಜಂಕ್ ಫುಡ್‌ಗಳಿಗೆ ಅಡಿಕ್ಟ್ ಆಗಿರುವುದು, ಕೂಲ್ ಡ್ರಿಂಕ್ಸ್, ಹೆಚ್ಚು ಸಕ್ಕರೆ, ಉಪ್ಪು ಇರುವ ಆಹಾರ ಸೇವನೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಅಧ್ಯಯನದ ವರದಿ ಪ್ರಸ್ತುತಪಡಿಸುತ್ತಿದೆ.

ಒಟ್ಟಿನಲ್ಲಿ ಮಕ್ಕಳಲ್ಲಿ ಶಾರೀರಿಕ ಚಟುವಟಿಕೆ ಹೆಚ್ಚಾಗಬೇಕು. ಆಹಾರ ಪದ್ಧತಿ ಬದಲಾಗಬೇಕು. ಪಾಶ್ಚಾತ್ಯ ಆಹಾರ ಪದ್ಧತಿ ಬಿಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈ ವರದಿ ನೀಡಲಿರುವ ಕಿಮ್ಸ್, ಆತಂಕದ ವಿಷಯವನ್ನು ಬಿಚ್ಚಿಡಲಿದೆ.

Tags:

error: Content is protected !!