Belagavi

ಬೆಳಗಾವಿಯಲ್ಲಿ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ: ‘ದೇಶಕ್ಕಾಗಿ ಜೀವಿಸುವುದು-ಮಡಿಯುವುದು ನಮ್ಮ ಧರ್ಮವಾಗಲಿ’ ; ಸಾಹಿತಿ ಅಶೋಕ ಹಂಚಲಿ

Share

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪ್ರತಿಭಾವಂತ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ-2026’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೇರಣಾ ನುಡಿಯನ್ನಾಡಿದ ಸಾಹಿತಿ ಅಶೋಕ ಹಂಚಲಿ ಅವರು, ಯುವ ಪೀಳಿಗೆಯಲ್ಲಿ ದೇಶಪ್ರೇಮ ಹಾಗೂ ನಾಡಿನ ಬಗ್ಗೆ ಅಭಿಮಾನ ಮೂಡಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಸಹಯೋಗದಲ್ಲಿ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪ್ರತಿಭಾವಂತ ಮಕ್ಕಳಿಗಾಗಿ “ಪ್ರತಿಭಾ ಪುರಸ್ಕಾರ – 2026” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕರಾದ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ಮಾರ್ಗದರ್ಶನ ಹಾಗೂ ನಾಯಕರ ಉಪಸ್ಥಿತಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ, ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೇರಣಾ ನುಡಿಯನ್ನಾಡಿದ ಬಸವನ ಬಾಗೇವಾಡಿಯ ಶಿಕ್ಷಕ ಹಾಗೂ ಸಾಹಿತಿಗಳಾದ ಅಶೋಕ ಹಂಚಲಿ ಅವರು, “ದೇಶದ ಬೆಳಕಾಗಿ ಬೆಳೆಯುತ್ತಿರುವ ಯುವ ಪೀಳಿಗೆಯ ಹೃದಯದಲ್ಲಿ ಈ ಮಣ್ಣು ಮತ್ತು ದೇಶದ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನ ಮೂಡದಿದ್ದರೆ ನಾವೆಲ್ಲರೂ ಸೇರಿ ಈ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ, ಭಾರತ ಮಾತೆಯ ಹಿಮಾಲಯವೇ ಕಿರೀಟ, ಕಾಶ್ಮೀರವೇ ಲಲಾಟ ಹಾಗೂ ಪ್ರಕೃತಿಯ ಸೌಂದರ್ಯವೇ ಈ ಭೂಮಿಯ ಐಶ್ವರ್ಯ. ಇದು ಕೇವಲ ನೆಲವಲ್ಲ, ಅರ್ಪಣೆ ಹಾಗೂ ತರ್ಪಣದ ಪವಿತ್ರ ಭೂಮಿ” ಎಂದು ಬಣ್ಣಿಸಿದರು. ಮುಂದುವರಿದು, ಈ ದೇಶಕ್ಕಾಗಿ ಜೀವಿಸುವುದು ಮತ್ತು ಮಡಿಯುವುದು ನಮ್ಮ ಧರ್ಮವಾಗಬೇಕು; ಸತ್ತ ಮೇಲೂ ಗಂಗೆಯಲ್ಲಿ ತೇಲುವ ಅಸ್ಥಿಗಳಿಂದ “ಭಾರತ್ ಮಾತಾ ಕಿ ಜೈ” ಎಂಬ ಧ್ವನಿ ಹೊರಹೊಮ್ಮುವಂತೆ, “ಇದು ನನ್ನ ದೇಶ, ನನ್ನ ಕರ್ನಾಟಕ, ನನ್ನ ನಾಡು” ಎನ್ನುವ ಭಾವನೆ ಮಕ್ಕಳಲ್ಲಿ ಮೊದಲ ಮಂತ್ರವಾಗಬೇಕು ಎಂದು ಪ್ರೇರೇಪಿಸಿದರು.

ಈ ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು, ಕಾರ್ಯಾಧ್ಯಕ್ಷ ಶಂಭುಗೌಡ ಎಸ್.‌, ಹಿರಿಯ ಉಪಾಧ್ಯಕ್ಷರಾದ ಆರ್. ಮೋಹನ್ ಕುಮಾರ್, ನಾಗರಾಜ ಆರ್. ಜುಮ್ಮನ್ನವರ, ಸೋಮಶೇಖರಯ್ಯ, ಸುರೇಶ ಸಿ. ಶೆಡಶ್ಯಾಳ ಹಾಗೂ ಮೋಹನ್ ಕುಮಾರ್ ಎಲ್.‌, ರಾಜ್ಯ ಖಜಾಂಚಿ ವಿ.ವಿ. ಶಿವರುದ್ರಯ್ಯ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಬಿ.ಎ. ಕುಂಬಾರ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!