ವಿಜಯಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಮುನ್ನೆಲೆಗೆ ಬಂದಿದೆ. ಇಂಡಿ ಪಟ್ಟಣದಲ್ಲಿ ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದು ಕೇವಲ ಇಂಡಿಯ ಸಮಸ್ಯೆಯಲ್ಲ… ವಿಜಯಪುರ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯೂ ಆತಂಕ ಮೂಡಿಸುವಂತಿದೆ. ಹಾಗಾದರೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಎಷ್ಟಿದೆ? ಕಳೆದ ವರ್ಷಗಳಲ್ಲಿ ಎಷ್ಟು ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ? ನೋಡೋಣ ಈ ವರದಿಯಲ್ಲಿ.


ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮತ್ತೆ ಬೀದಿ ನಾಯಿಗಳ ಆತಂಕ… ರೇವತಮಡ್ಡಿಯ ಗುತ್ತೇದಾರ ಲೇಔಟ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 9 ವರ್ಷದ ಪ್ರೇರಣಾ ಗೌಳಿ ಎಂಬ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಬಾಲಕಿಯ ಮುಖ ಹಾಗೂ ಕಣ್ಣಿನ ಕೆಳಭಾಗಕ್ಕೆ ಗಾಯವಾಗಿದ್ದು, ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದೇ ವೇಳೆ ಕರೀಂ ನಗರದಲ್ಲಿ ಅಂಗಡಿಗೆ ತೆರಳುತ್ತಿದ್ದ 5 ವರ್ಷದ ತೈಮೂರು ಮಕಾನದಾರ್ ಎಂಬ ಬಾಲಕನ ಮೇಲೂ ಬೀದಿ ನಾಯಿ ದಾಳಿ ಮಾಡಿದ್ದು, ಕೈಗೆ ಗಾಯವಾಗಿದೆ. ಇಬ್ಬರು ಮಕ್ಕಳಿಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂಡಿಯಲ್ಲಿ ನಡೆದಿರುವ ಈ ಎರಡು ಘಟನೆಗಳು ಮತ್ತೆ ಬೀದಿ ನಾಯಿಗಳ ಸಮಸ್ಯೆಯನ್ನು ಮುನ್ನೆಲೆಗೆ ತಂದಿವೆ. ಮಕ್ಕಳ ಮೇಲೆ ನಡೆಯುತ್ತಿರುವ ದಾಳಿಯಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆದರೆ ವಿಜಯಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಮಸ್ಯೆ ಇಷ್ಟಕ್ಕೇ ಸೀಮಿತವಾಗಿಲ್ಲ… ಲಭ್ಯವಿರುವ ಅಂಕಿ-ಅಂಶಗಳೇ ಜಿಲ್ಲೆಯ ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತವೆ. ಆರೋಗ್ಯ ಇಲಾಖೆಯ IDSP ಮಾಹಿತಿಯನ್ನು ಆಧರಿಸಿದ ವರದಿಗಳ ಪ್ರಕಾರ, 2025ರ ಜನವರಿ 1ರಿಂದ ಫೆಬ್ರವರಿ 23ರವರೆಗೆ ವಿಜಯಪುರ ಜಿಲ್ಲೆಯಲ್ಲಿ 4,552 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದವು. ಅಂದರೆ ಕೇವಲ 54 ದಿನಗಳ ಅವಧಿಯಲ್ಲೇ ಸಾವಿರಾರು ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಬೀದಿ ನಾಯಿಗಳ ದಾಳಿ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲಿನ ದಾಳಿಯ ಘಟನೆಗಳೂ ಆತಂಕಕ್ಕೆ ಕಾರಣವಾಗಿವೆ. ಹೀಗಾಗಿ ಕೇವಲ ದಾಳಿ ನಡೆದಾಗ ಚಿಕಿತ್ಸೆ ನೀಡುವುದಕ್ಕಿಂತ, ಬೀದಿ ನಾಯಿಗಳ ಸಂತಾನಹರಣ, ರೇಬಿಸ್ ಲಸಿಕಾಕರಣ ಹಾಗೂ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ನಿರಂತರ ಹಾಗೂ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕಿದೆ. ಇಂಡಿಯ ಪ್ರಸ್ತುತ ಘಟನೆ ಹಾಗೂ ಜಿಲ್ಲೆಯ ಹಿಂದಿನ ಅಂಕಿ-ಅಂಶಗಳು ಒಂದೇ ಸಂಗತಿಯನ್ನು ಸೂಚಿಸುತ್ತಿವೆ—ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ.
ಒಂದೆಡೆ ಇಂಡಿಯಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ… ಮತ್ತೊಂದೆಡೆ ವಿಜಯಪುರ ಜಿಲ್ಲೆಯ ನಾಯಿ ಕಡಿತದ ಆತಂಕಕಾರಿ ಅಂಕಿ-ಅಂಶಗಳು… ಹೀಗಾಗಿ ಬೀದಿ ನಾಯಿಗಳ ಸಮಸ್ಯೆ ಇದೀಗ ಕೇವಲ ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ. ಜನರ ಸುರಕ್ಷತೆ ಹಾಗೂ ಪ್ರಾಣಿಗಳ ಕಲ್ಯಾಣ ಎರಡನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಇಂಡಿಯ ಈ ಘಟನೆ ಬಳಿಕವಾದರೂ ವಿಜಯಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳುತ್ತಾ? ಅಥವಾ ಮತ್ತೊಂದು ದಾಳಿಯವರೆಗೆ ಕಾಯುತ್ತಾ? ಎಂಬ ಪ್ರಶ್ನೆ ಈಗ ಸಾರ್ವಜನಿಕರ ಮುಂದಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.
