ನಶೆಯ ಬಲೆಗೆ ಬೀಳುವುದರಿಂದ ಶರೀರ ಹಾಗೂ ಜೀವನಾಧಾರವೇ ಹಾಳಾಗುತ್ತದೆ. ಇದರಿಂದಾಗಿ ಜೀವನದಲ್ಲಿ ಖುಷಿ, ಶಾಂತಿ ಮತ್ತು ಸಮೃದ್ಧಿ ಉಳಿಯಲು ಸಾಧ್ಯವಿಲ್ಲ. ನಶೆಯು ಅಪಾರ ಸಂಖ್ಯೆಯ ಜನರನ್ನು ಪಾತಾಳಕ್ಕೆ ತಳ್ಳುತ್ತಿದ್ದು, ಪ್ರತಿಯೊಬ್ಬರೂ ಇದರಿಂದ ದೂರವಿರುವುದು ಸೂಕ್ತ ಎಂದು ಚಿಕ್ಕೋಡಿ ತಾಲೂಕಿನ ಅಂಕಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಆರತಿ ಹೇಳಿದರು.


ಯಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಕುರಿತು ಆಯೋಜಿಸಲಾಗಿದ್ದ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತ ಸರ್ಕಾರ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಒಪ್ಪಂದ ಮಾಡಿಕೊಂಡು ದೇಶದ 10 ಕೋಟಿ ಯುವಕರನ್ನು ನಶಾಪೀಡಿತ ಸ್ಥಿತಿಯಿಂದ ಮುಕ್ತಗೊಳಿಸುವ ಬೃಹತ್ ಉದ್ದೇಶವನ್ನು ಹೊಂದಿದೆ. ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ, ಮದ್ಯಪಾನ ಸೇರಿದಂತೆ ಅನೇಕ ರೀತಿಯ ವ್ಯಸನಗಳಿಂದ ಮುಕ್ತಿ ಪಡೆದಾಗ ಮಾತ್ರ ಪ್ರತಿಯೊಬ್ಬರೂ ಸುಖ, ಸಂತೋಷ ಮತ್ತು ಆನಂದದಿಂದ ಬಾಳಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತ ಯಾರಾದರೂ ವ್ಯಸನಿಗಳಿದ್ದರೆ, ಅವರಿಗೆ ನಶೆಯ ದುಷ್ಪರಿಣಾಮಗಳನ್ನು ತಿಳಿಸಿ ಹೇಳಿ ವ್ಯಸನದಿಂದ ದೂರವಿರಲು ಮನವಿ ಮಾಡಬೇಕು ಹಾಗೂ ವಿದ್ಯಾರ್ಥಿಗಳು ಮೊಬೈಲ್ ದಿಂದ ದೂರ ಉಳಿದು ಅಭ್ಯಾಸದತ್ತ ಹೆಚ್ಚಿನ ಕಾಳಜಿ ವಹಿಸಿ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಮಾರಿ ಭಾಗ್ಯಶ್ರೀಯವರು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಧೈಯ-ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ನಂತರ ಬಿ.ಕೆ. ಸವಿತಾಯವರು ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಮನೋಹರ ತೋರಸೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಆರ್.ಜೆ. ಕಾಂಬಳೆ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಗುರವ ಹಾಗೂ ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
