Belagavi

ಸಂವಿಧಾನ ವಿರೋಧಿ ಪ್ರಮಾಣವಚನ ಸ್ವೀಕರಿಸಿದರೆ ಕೋರ್ಟ್‌ ಮೆಟ್ಟಿಲೇರುತ್ತೇವೆ: ಭೀಮಪ್ಪಾ ಗಡಾದ್ ಎಚ್ಚರಿಕೆ

Share

ರಾಜ್ಯ ಮಂತ್ರಿಮಂಡಲ ವಿಸ್ತರಣೆ ಬೆನ್ನಲ್ಲೇ ಶಾಸಕರ ಪ್ರಮಾಣವಚನ ಸ್ವೀಕಾರದ ಕುರಿತು ಪ್ರಮುಖ ಚರ್ಚೆಗಳು ಆರಂಭವಾಗಿವೆ. ಸಂವಿಧಾನದ ಆಶಯ ಮತ್ತು ನಿಯಮಗಳ ಉಲ್ಲಂಘನೆಯಾದರೆ ಶಾಸಕರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೀಮಪ್ಪಾ ಗಡಾದ್, ಸಚಿವ ಸಂಪುಟ ಸೇರ್ಪಡೆಯಾಗುವ ಶಾಸಕರಿಗೆ ಪ್ರಮಾಣವಚನ ಸ್ವೀಕರಿಸುವ ಸರಿಯಾದ ವಿಧಾನವೇ ತಿಳಿದಿಲ್ಲದಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದಿದ್ದಾರೆ. ಸಂವಿಧಾನದ 3ನೇ ಅನುಚ್ಛೇದದ ಪ್ರಕಾರ ಸಚಿವರು ದೇವರ ಹೆಸರಿನಲ್ಲಿ ಅಥವಾ ಶ್ರದ್ಧಾಪೂರ್ವಕವಾಗಿ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು. ಇದನ್ನು ಬಿಟ್ಟು ಸಂವಿಧಾನದ ನಿಯಮಗಳ ವಿರುದ್ಧವಾಗಿ ಅಥವಾ ಆಶಯಗಳಿಗೆ ಧಕ್ಕೆ ಬರುವಂತೆ ಪ್ರಮಾಣವಚನ ಸ್ವೀಕರಿಸಿದರೆ ಅಂತಹವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವುದಾಗಿ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಗೌರವಾನ್ವಿತ ರಾಜ್ಯಪಾಲರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇಂತಹ ನಿಯಮಬಾಹಿರ ಕಾರ್ಯಕ್ರಮಗಳನ್ನು ತಡೆಯುವ ಅಧಿಕಾರ ಹೊಂದಿದ್ದು, ತಮ್ಮ ಕಣ್ಣೆದುರೇ ಸಂವಿಧಾನಕ್ಕೆ ಅಪಚಾರವಾಗುತ್ತಿದ್ದರೆ ಮೌನವಾಗಿರಬಾರದು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಅಧಿಕೃತ ರಹಸ್ಯಗಳು ಹಾಗೂ ದೇಶದ ಭದ್ರತೆಯ ವಿಷಯಗಳನ್ನು ವೈಯಕ್ತಿಕಕ್ಕೆ ಬಳಸಬಾರದು ಎಂಬುದೇ ಪ್ರಮಾಣವಚನದ ಮುಖ್ಯ ಉದ್ದೇಶವಾಗಿದೆ ಎಂದು ಗಡಾದ್ ತಿಳಿಸಿದರು. ನಿಯಮ ಉಲ್ಲಂಘಿಸಿ ಪ್ರಮಾಣವಚನ ಸ್ವೀಕರಿಸುವ ಸಚಿವರಿಗೆ ಸಚಿವ ಸ್ಥಾನದ ಜವಾಬ್ದಾರಿಯಾಗಲಿ, ಭತ್ಯೆ ಅಥವಾ ಕಚೇರಿ ಸಿಬ್ಬಂದಿ ಪಡೆಯುವ ಹಕ್ಕಾಗಲಿ ಇರುವುದಿಲ್ಲ. ಅಷ್ಟೇ ಅಲ್ಲದೆ, ಅವರು ಕೈಗೊಳ್ಳುವ ನಿರ್ಧಾರಗಳು ಹಾಗೂ ಸಹಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಅಂತಹವರು ಪುನಃ ನಿಯಮದಂತೆ ಪ್ರಮಾಣವಚನ ಸ್ವೀಕರಿಸುವವರೆಗೆ ಸಚಿವರಾಗಿರುವುದಿಲ್ಲ, ಹೀಗಾಗಿ ಕ್ಷೇತ್ರದ ಜನತೆ ಅವರನ್ನು ಸಚಿವರ ಬದಲಾಗಿ ಕೇವಲ ಶಾಸಕರಂತೆ ಕಾಣಬೇಕು ಎಂದು ಅವರು ಕರೆ ನೀಡಿದ್ದಾರೆ.

Tags:

error: Content is protected !!