ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು, ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಕರೆ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಇಂದು ಸಂಜೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸವದಿ ಅವರ ಸಚಿವ ಸಂಪುಟ ಸೇರ್ಪಡೆ ಬೆಳಗಾವಿ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಸುಳಿವಿನ ಬೆನ್ನಲ್ಲೇ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಸರ್ಕಾರದ ಹಂತದಿಂದ ಮಹತ್ವದ ಕರೆ ಬಂದಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಲಕ್ಷ್ಮಣ್ ಸವದಿ, ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಈಗಷ್ಟೇ ಕರೆ ಮಾಡಿದ್ದಾರೆ. ಇಂದು ಸಂಜೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಸೂಚಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಹಿರಿಯ ನಾಯಕರಾಗಿರುವ ಸವದಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುತ್ತಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಸಂಭ್ರಮಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
