ಕಾವೇರಿ ನೀರು ಬಿಡುಗಡೆ ಆದೇಶ ವಿರೋಧಿಸಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಒತ್ತಾಯಿಸಿ ಕನ್ನಡ ಪರ ಹೋರಾಟಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ರೀ ವಾಟಾಳ್ ನಾಗರಾಜ್ ಅವರು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದು, ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.

ರಾಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ಅವರು ಬುಧವಾರ ಮುಂಜಾನೆ 10 ಗಂಟೆಗೆ ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ವಿವಿಧ ಸಮುದಾಯಗಳು, ರಿಕ್ಷಾ ಚಾಲಕರ ಸಂಘಟನೆಗಳು, ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಹಾಗೂ ರೈತ ಸಂಘಟನೆಗಳ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಕಾವೇರಿ ವಿವಾದದ ಜೊತೆಗೆ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಅಂಗೀಕರಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಈ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಕುರಿತು ಈಗಾಗಲೇ ನಗರಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿದೆ ಎಂದು ಕನ್ನಡ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ಕೋಲಾ ತಿಳಿಸಿದ್ದಾರೆ.
ಈ ಸಭೆಯಲ್ಲಿ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
