Belagavi

ಕ್ರೀಡಾ ಕೂಟಗಳಲ್ಲಿ ವಯೋಮಿತಿ ಅಕ್ರಮ ತಡೆಗೆ ಆಗ್ರಹ: ಬೆಳಗಾವಿ ಜಿಲ್ಲಾಡಳಿತಕ್ಕೆ ಸಾಂಬ್ರಾ ಗ್ರಾಮಸ್ಥರ ಮನವಿ

Share

ಶಾಲಾ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಯೋಮಿತಿ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಗುರುವಾರ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.

ಶಾಲಾ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಕೆಲವು ಸ್ಪರ್ಧಿಗಳು ನಕಲಿ ಜನನ ಪ್ರಮಾಣಪತ್ರಗಳು ಹಾಗೂ ತಪ್ಪು ದಾಖಲೆಗಳನ್ನು ಬಳಸಿ ವಯೋಮಿತಿ ನಿಯಮಗಳನ್ನು ಉಲ್ಲಂಘಿಸಿ ಭಾಗವಹಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದರಿಂದ ನೈಜ ಅರ್ಹತೆ ಹೊಂದಿರುವ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದ್ದು, ಕ್ರೀಡಾ ಕ್ಷೇತ್ರದ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಸ್ಪರ್ಧೆಗೆ ಧಕ್ಕೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಅನುಮಾನಾಸ್ಪದ ಪ್ರಕರಣಗಳಲ್ಲಿ ವಯಸ್ಸು ದೃಢೀಕರಣ ಪರೀಕ್ಷೆ ನಡೆಸುವ ಜೊತೆಗೆ ದಾಖಲೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಮಾದರಿಯಾಗಿ ಪರಿಗಣಿಸಿ, ಬೆಳಗಾವಿ ಜಿಲ್ಲೆಯಲ್ಲಿಯೂ ಇದೇ ರೀತಿಯ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಎಲ್ಲಾ ಕ್ರೀಡಾಪಟುಗಳ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಹಾಗೂ ಶಾಲಾ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಬೇಕು. ವಯಸ್ಸಿನ ಬಗ್ಗೆ ಅನುಮಾನವಿರುವವರಿಗೆ ಕಡ್ಡಾಯವಾಗಿ ವಯಸ್ಸು ದೃಢೀಕರಣ ಪರೀಕ್ಷೆ ನಡೆಸಬೇಕು. ನಕಲಿ ದಾಖಲೆಗಳನ್ನು ಸಲ್ಲಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಜಿಲ್ಲೆಯ ಎಲ್ಲಾ ಶಾಲೆಗಳು, ಕ್ರೀಡಾ ಸಂಘಗಳು ಹಾಗೂ ಸ್ಪರ್ಧಾ ಆಯೋಜಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಅಗತ್ಯ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಕ್ರಮಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಪ್ರತಿಭಾವಂತ ಹಾಗೂ ಅರ್ಹ ಕ್ರೀಡಾಪಟುಗಳಿಗೆ ನ್ಯಾಯ ದೊರೆಯಲಿದ್ದು, ಕ್ರೀಡಾ ಸ್ಪರ್ಧೆಗಳ ವಿಶ್ವಾಸಾರ್ಹತೆ ಮತ್ತಷ್ಟು ಬಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಾಸುದೇವ ಪಾಟೀಲ್, ಕುಮಾರ ಹುಬ್ವಳಿಕರ್, ಸೋಮನಾಥ ಗಂಟೇಕರ್, ಸುಧೀರ ಮಾಲಾಯಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!