ಮಲಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ತೀವ್ರ ಅಭಾವ ಎದುರಾಗಿದ್ದು, ತಕ್ಷಣವೇ ಕನಿಷ್ಠ ೨ ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಜಿಲ್ಲಾಡಳಿತದ ಬಾಗಿಲು ತಟ್ಟಿವೆ. ರೈತರ ತೀವ್ರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಿರುವ ಬೆಳಗಾವಿ ಜಿಲ್ಲಾಧಿಕಾರಿಗಳು, ನಾಳೆ ಅಥವಾ ನಾಡಿದ್ದರೊಳಗೆ ನೀರು ಬಿಡುಗಡೆ ಮಾಡುವ ಸಕಾರಾತ್ಮಕ ಭರವಸೆ ನೀಡಿದ್ದಾರೆ.

ಸವದತ್ತಿ ತಾಲೂಕಿನ ಹಿರೇಕುಂಬಿ ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಳೆಯಿಲ್ಲದೆ ಬೋರ್ವೆಲ್ ಹಾಗೂ ಭಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಮಲಪ್ರಭಾ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಕಾಲುವೆಗೆ ನೀರು ಹರಿಸದಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ರೈತರ ಬೃಹತ್ ನಿಯೋಗವು ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಭೇಟಿ ನೀಡಿ, ತಕ್ಷಣವೇ ಕನಿಷ್ಠ ೨ ಟಿಎಂಸಿ ನೀರು ಬಿಡುವಂತೆ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಮಳೆಯಿಲ್ಲದೆ ಈ ಭಾಗದ ಸುಮಾರು ೧೫ಕ್ಕೂ ಹೆಚ್ಚು ಹಳ್ಳಿಗಳ ಬೋರ್ವೆಲ್ಗಳು ಹಾಗೂ ಬಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಜಲಾಶಯದಲ್ಲಿ ಪ್ರಸ್ತುತ ಸಾಲಿನಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ನೀರು ಹರಿಸದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ ಜಿಲ್ಲಾಡಳಿತವು ತಕ್ಷಣವೇ ಸ್ಪಂದಿಸಿ, ಇಂದಿನಿಂದ ಅಥವಾ ನಾಳೆಯಿಂದಲೇ ಕಾಲುವೆಗೆ ನೀರು ಬಿಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ರೈತ ಮುಖಂಡರು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ರೈತರ ಅಹವಾಲನ್ನು ಅತ್ಯಂತ ಗಂಭೀರವಾಗಿ ಆಲಿಸಿದ ಜಿಲ್ಲಾಧಿಕಾರಿಗಳು ತಕ್ಷಣವೇ ಸ್ಪಂದಿಸಿ, ಇಂದು ಸಂಜೆಯೊಳಗೆ ಸೂಕ್ತ ನಿರ್ಧಾರ ಕೈಗೊಂಡು ನಾಳೆ ಅಥವಾ ನಾಡಿದ್ದರೊಳಗೆ ಸಂಬಂಧಪಟ್ಟ ಕೆರೆ ಹಾಗೂ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಈ ಕ್ಷಿಪ್ರ ಹಾಗೂ ಧನಾತ್ಮಕ ಸ್ಪಂದನೆಗೆ ಮುಖಂಡ ಶಶಿಕಾಂತ್ ಗುರೂಜಿ ಅವರು ಸಮಸ್ತ ಸವದತ್ತಿ ತಾಲೂಕಿನ ರೈತ ಬಾಂಧವರ ಪರವಾಗಿ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
