ವಿಶೇಷ ಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಚಿಕಿತ್ಸೆ ಹಾಗೂ ಸಮಗ್ರ ಅಭಿವೃದ್ಧಿಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ವಿಜಯಪುರದಲ್ಲಿ ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆ ಆರಂಭವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಶಾಲೆಯನ್ನು ಉದ್ಘಾಟಿಸಿ, ವಿಶೇಷ ಮಕ್ಕಳ ಸಬಲೀಕರಣಕ್ಕೆ ಇದು ಮಹತ್ವದ ಹೆಜ್ಜೆ ಎಂದು ಹೇಳಿದರು. ವಿಜಯಪುರ ನಗರದ ಬಿ.ಎಂ. ಪಾಟೀಲ ರಸ್ತೆಯ ಪ್ರಕೃತಿ ಕಾಲನಿಯಲ್ಲಿ ಸ್ಥಾಪಿಸಲಾದ ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ವಿಶೇಷ ಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸೂಕ್ತ ಚಿಕಿತ್ಸೆ ಹಾಗೂ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಈ ಶಾಲೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಸಮಾಜದಲ್ಲಿ ವಿಶೇಷ ಮಕ್ಕಳಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂದು ತಿಳಿಸಿದರು. ಇನ್ನೂ ವಿಧಾನಪರಿಷತ್ ಸದಸ್ಯ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಮಾತನಾಡಿ, ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈ ಸಮನ್ವಯ ಶಾಲೆ ಮಹತ್ವದ ಪಾತ್ರ ವಹಿಸಲಿದೆ ಎಂದರು. ದೈಹಿಕ, ಬೌದ್ಧಿಕ, ಶ್ರವಣ, ದೃಷ್ಟಿ ಹಾಗೂ ಕಲಿಕಾ ನ್ಯೂನ್ಯತೆ ಹೊಂದಿರುವ ಮಕ್ಕಳಿಗೆ ಶಿಕ್ಷಣ, ತರಬೇತಿ ಮತ್ತು ಚಿಕಿತ್ಸೆಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ವಿನೂತನ ಪ್ರಯತ್ನ ಇದಾಗಿದೆ ಎಂದು ಹೇಳಿದರು.

