ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಲಕ್ಷಾಂತರ ಸಹಿಗಳನ್ನೊಳಗೊಂಡ ಮನವಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಗೋವುಗಳ ರಕ್ಷಣೆ, ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಗೋಮಾತೆಗೆ ‘ರಾಷ್ಟ್ರಮಾತೆ’ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಐತಿಹಾಸಿಕ ಚನ್ನಮ್ಮ ವೃತ್ತದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಗೋವುಗಳ ಸಮೇತವಾಗಿ ಬೃಹತ್ ಮೆರವಣಿಗೆ ನಡೆಸಲಾಯಿತು. ಎರಡನೇ ಹಂತದ ‘ಗೋ ಸಮ್ಮಾನ್ ಆಹ್ವಾನ್ ಅಭಿಯಾನ’ದ ಭಾಗವಾಗಿ ಸಂಗ್ರಹಿಸಲಾದ 1.80 ಲಕ್ಷ ಸಹಿಗಳನ್ನೊಳಗೊಂಡ ಮನವಿ ಪತ್ರವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಯವರಿಗೆ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು, “ಮೊದಲ ಹಂತದಲ್ಲಿ 1.80 ಲಕ್ಷ ಸಹಿ ಸಂಗ್ರಹಿಸಿ ಕೋಟಿಗಟ್ಟಲೆ ಜನರ ಬೆಂಬಲದೊಂದಿಗೆ ಮನವಿ ಸಲ್ಲಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ಜಿಲ್ಲಾವಾರು ಕಾರ್ಯಕ್ರಮ ನಡೆಸಿ ಪ್ರಧಾನಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುತ್ತಿದೆ. ಸರ್ಕಾರ ಮತ್ತು ರಾಷ್ಟ್ರಪತಿಗಳು ಗೋಮಾತೆಯನ್ನು ತಕ್ಷಣ ‘ರಾಷ್ಟ್ರಮಾತೆ’ ಎಂದು ಘೋಷಿಸಬೇಕು. ಇಲ್ಲವಾದಲ್ಲಿ 2027ರ ಆಗಸ್ಟ್ನಲ್ಲಿ ದೆಹಲಿಯಲ್ಲಿ ಮೂರನೇ ಹಂತದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು” ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಇದೇ ವೇಳೆ ಗೋ ರಕ್ಷಕ ನಿಲೇಶ್ ಮಾತನಾಡಿ, “ಈ ಹಿಂದೆ ತಹಶೀಲ್ದಾರ್ಗೆ ನೀಡಿದ ಮನವಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಈಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸುವುದರ ಜೊತೆಗೆ, ಪ್ರತ್ಯೇಕ ಗೋ ಸಚಿವಾಲಯ ಸ್ಥಾಪಿಸಬೇಕು. ರಸ್ತೆಗಳಲ್ಲಿ ಗಾಯಗೊಳ್ಳುವ ಪ್ರಾಣಿಗಳ ಚಿಕಿತ್ಸೆಗೆ 24/7 ಆಂಬುಲೆನ್ಸ್ ಹಾಗೂ ಪಶುವೈದ್ಯರ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ 2027ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ಸಾಧು-ಸಂತರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು. ಬೈಟ್
ಈ ವೇಳೆ ಗೋರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
