Vijaypura

ವೀರ ಯೋಧರಿಗೆ ಗೌರವ ನಮನ; ಬಸವನ ಬಾಗೇವಾಡಿಯಲ್ಲಿ ಅದ್ಧೂರಿಯಾಗಿ ಕಾರ್ಗಿಲ್ ವಿಜಯೋತ್ಸವ

Share

1999ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಸಾಧಿಸಿದ ಐತಿಹಾಸಿಕ ವಿಜಯದ ಸ್ಮರಣಾರ್ಥ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ 27ನೇ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಮಾಜಿ ಯೋಧರು, ವೀರ ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆ ಯಿಂದ ಪಟ್ಟಣದಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧ ಅಶೋಕ್ ಜಾದವ್ ಅವರ ಪುತ್ಥಳಿಗೆ ಶ್ರೀ ವಿರಕ್ತಮಠದ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಪುಷ್ಪಮಾಲೆ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾಜಿ ಯೋಧರ ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸೈನಿಕ ಕಲ್ಯಾಣ ಮಂಟಪ ತಲುಪಿತು.

ದೇಶಭಕ್ತಿಯ ಘೋಷಣೆಗಳೊಂದಿಗೆ ನಡೆದ ರ‍್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು. ಸೈನಿಕ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಗನಗೌಡ ಚಿಕ್ಕೊಂಡ, ದೇಶದ ಗಡಿಯಲ್ಲಿ ಯೋಧರು ಹಗಲಿರುಳು ಕಾವಲು ಕಾಯುವುದರಿಂದಲೇ ನಾವೆಲ್ಲರೂ ಸುರಕ್ಷಿತವಾಗಿ ಬದುಕುತ್ತಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆ ಸೇರಿ ರಾಷ್ಟ್ರಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಇತರ ಗಣ್ಯರು ಕೂಡ ಕಾರ್ಗಿಲ್ ಯೋಧರ ಶೌರ್ಯ, ತ್ಯಾಗ ಹಾಗೂ ದೇಶಭಕ್ತಿಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಶ್ರೀ ವಿರಕ್ತಮಠದ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಆದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಂಕರಗೌಡ ಬಿರಾದಾರ, ರುದ್ರಗೌಡ ಬಿರಾದಾರ, ಕೊಟ್ರೇಶ್ ಹೆಗಡ್ಯಾಳ, ಈರಕಾರ ಮುತ್ಯಾ, ಸುರೇಶ್ ಹಾರಿವಾಳ, ಜಗದೀಶ್ ಕೊಟ್ಟಶೆಟ್ಟಿ, ಎಚ್.ಬಿ. ಬಾರಿಕಾಯಿ, ಎಸ್.ಬಿ. ಕೊಟ್ರಶೆಟ್ಟಿ ಸೇರಿದಂತೆ ಮಾಜಿ ಯೋಧರು, ವೀರ ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು.

Tags:

error: Content is protected !!