Vijaypura

ಕೃಷ್ಣೆಯ ಜೀವಜಲ ನದಿಗೆ… ರೈತರ ಹೊಲಗಳಿಗೆ ಯಾವಾಗ?; ಆಲಮಟ್ಟಿಯಿಂದ ಲಕ್ಷಾಂತರ ಕ್ಯುಸೆಕ್ ನೀರು ಹರಿದರೂ ಕೃಷಿ ಮಾತ್ರ ಬರಿದೇ!”

Share

ಉತ್ತರ ಕರ್ನಾಟಕದ ರೈತರು ಕಾಯುತ್ತಿರುವುದು ಮಳೆಯನ್ನಲ್ಲ… ಒಂದು ಆದೇಶವನ್ನು. ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ಅದು ರೈತರ ಹೊಲಗಳಿಗೆ ತಲುಪುತ್ತಿಲ್ಲ. ಬದಲಿಗೆ ಲಕ್ಷಾಂತರ ಕ್ಯೂಸೆಕ್ ಜೀವಜಲ ನದಿ ಪಾತ್ರದ ಮೂಲಕ ಕೆಳಭಾಗದತ್ತ ಹರಿಯುತ್ತಿದೆ. ಹಾಗಾದರೆ ಕೃಷ್ಣೆಯ ನೀರು ಯಾರಿಗಾಗಿ? ರೈತರ ಬೆಳೆಗಳಿಗೆ ಜೀವ ಸಿಗುತ್ತದೆಯೇ, ಅಥವಾ ನೀರು ಹೀಗೆ ಹರಿದು ಹೋಗುತ್ತದೆಯೇ? ಈ ಪ್ರಶ್ನೆಗಳ ನಡುವೆಯೇ ಇನ್ ನ್ಯೂಜ್ 24×7 ವಿಶೇಷ ವರದಿ.

ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜುಲೈ 27ರ ಬೆಳಿಗ್ಗೆ 8 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 519.12 ಮೀಟರ್ ತಲುಪಿದ್ದು, 114.896 ಟಿಎಂಸಿ ಒಟ್ಟು ಹಾಗೂ 97.276 ಟಿಎಂಸಿ ಜೀವಂತ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 73,461 ಕ್ಯುಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಕೃಷಿಗೆ ಮಾತ್ರ ಶೂನ್ಯ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಬದಲಾಗಿ 27,500 ಕ್ಯುಸೆಕ್ ನೀರನ್ನು ನದಿ ಪಾತ್ರದ ಮೂಲಕ ಹರಿಸಲಾಗುತ್ತಿದ್ದು, ಒಟ್ಟು 28,438 ಕ್ಯುಸೆಕ್ ನೀರು ಜಲಾಶಯದಿಂದ ಹೊರಹೋಗುತ್ತಿದೆ. ನೀರಿನ ಸಂಗ್ರಹ ಸಾಕಷ್ಟಿದ್ದರೂ ಕೃಷಿ ಕಾಲುವೆಗಳಿಗೆ ನೀರು ಹರಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಜಲಾಶಯಗಳ ಸುರಕ್ಷತೆ ಮತ್ತು ಒಳಹರಿವಿನ ನಿರ್ವಹಣೆಗೆ ಈ ಕ್ರಮ ಅಗತ್ಯವಾಗಿದ್ದರೂ, ಈ ನೀರನ್ನು ಮೊದಲು ಕೃಷಿಗೆ ಬಳಸಬೇಕಿತ್ತು ಎಂಬುದು ರೈತರ ವಾದವಾಗಿದೆ.

ಸದ್ಯ ಕುಡಿಯುವ ನೀರಿನ ಉದ್ದೇಶಕ್ಕಾಗಿ ವಿವಿಧ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಆದರೆ ಕೃಷಿ ಕಾಲುವೆಗಳಿಗೆ ಇನ್ನೂ ನೀರು ಹರಿಸದ ಕಾರಣ ರೈತರ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ತೊಗರಿ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿವೆ. ಇಂತಹ ಸಂದರ್ಭದಲ್ಲೇ ಕೃಷಿಗೆ ನೀರು ಬಿಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಕೃಷಿ ನೀರು ಬಿಡುಗಡೆಗೆ ಒತ್ತಾಯಿಸಿ ಹಲವು ಕಡೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಆದರೂ ಕೃಷ್ಣಾ ನೀರಾವರಿ ಸಲಹಾ ಸಮಿತಿ ಸಭೆ ಅಥವಾ ನೀರು ಬಿಡುಗಡೆ ಕುರಿತು ಸರ್ಕಾರದಿಂದ ಯಾವುದೇ ಸ್ಪಷ್ಟ ಘೋಷಣೆ ಬಂದಿಲ್ಲ. ಇದೇ ರೈತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಇನ್ನೂ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಡಿ.ಕೆ. ಶಿವಕುಮಾರ್ ಅವರು ರೈತರ ಹಿತದೃಷ್ಟಿಯಿಂದ ಮೊದಲು ನೀರು ಬಿಡುಗಡೆ ಮಾಡಿ, ಬಳಿಕ ಸಲಹಾ ಸಮಿತಿಯ ಅನುಮೋದನೆ ಪಡೆಯುವ ಕ್ರಮ ಅನುಸರಿಸಿದ್ದರು. ಈಗ ಅವರು ರಾಜ್ಯದ ಮುಖ್ಯಮಂತ್ರಿ ಯಾಗಿರುವ ಹಿನ್ನೆಲೆಯಲ್ಲಿ ಅದೇ ರೀತಿಯ ನಿರ್ಧಾರ ಕೈಗೊಂಡು ಕೃಷ್ಣೆಯ ನೀರನ್ನು ರೈತರ ಹೊಲಗಳಿಗೆ ಹರಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಬಲವಾಗುತ್ತಿದೆ.

ಒಟ್ನಲ್ಲಿ ಆಲಮಟ್ಟಿಯಲ್ಲಿ ನೀರಿನ ಕೊರತೆ ಇಲ್ಲ… ಕೊರತೆಯಿರುವುದು ರೈತರ ಹೊಲಗಳಿಗೆ ತಲುಪುವ ನೀರಿನಷ್ಟೇ. ನದಿ ಪಾತ್ರದಲ್ಲಿ ಹರಿಯುತ್ತಿರುವ ಪ್ರತಿಯೊಂದು ಹನಿ ನೀರನ್ನು ನೋಡುತ್ತಾ ರೈತ ತನ್ನ ಒಣಗುತ್ತಿರುವ ಬೆಳೆಗಳತ್ತ ನೋವಿನಿಂದ ಕಣ್ಣಿಟ್ಟಿದ್ದಾನೆ. ‘ಜೀವಜಲ ಮೊದಲು ಜೀವ ಉಳಿಸಬೇಕೋ… ಅಥವಾ ಹೀಗೆ ಹರಿದು ಹೋಗಬೇಕೋ?’ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಿರುವುದು ಈಗ ಸರ್ಕಾರದ ಸರದಿ. ಕೃಷ್ಣೆಯ ನೀರು ರೈತರ ಹೊಲಗಳಿಗೆ ಯಾವಾಗ ತಲುಪುತ್ತದೆ ಎಂಬುದರತ್ತ ಇಡೀ ಉತ್ತರ ಕರ್ನಾಟಕದ ಚಿತ್ತ ನೆಟ್ಟಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!