ರಾಜಧಾನಿ ಬೆಂಗಳೂರಿನ ಥಣಿಸಂದ್ರದ ಗ್ಯಾರೇಜ್ನಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕೋಟಿ ಕೋಟಿ ಮೌಲ್ಯದ ಕಾರುಗಳು ಉರಿದು ಬೂದಿಯಾಗಿವೆ. ಗ್ಯಾರೇಜ್ನಲ್ಲಿದ್ದ ಜಾಗ್ವಾರ್, ರೇಂಜ್ ರೋವರ್ನಂತಹ ಲಕ್ಷುರಿ ಕಾರುಗಳು ಸೇರಿದಂತೆ ಪಕ್ಕದ ಫ್ಯಾಕ್ಟರಿಗೂ ಬೆಂಕಿ ವ್ಯಾಪಿಸಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ರಾಜಧಾನಿ ಬೆಂಗಳೂರಿನ ಥಣಿಸಂದ್ರ ಮುಖ್ಯ ರಸ್ತೆಯ ಭಾರತಿ ಸಿಟಿ ಬಳಿ ಇರುವ ಗ್ಯಾರೇಜ್ ಒಂದರಲ್ಲಿ ಸೋಮವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ. ಮುಂಜಾನೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗ್ಯಾರೇಜ್ಗೆ ಹಬ್ಬಿದ್ದು, ಅಲ್ಲಿ ಪಾರ್ಕ್ ಮಾಡಲಾಗಿದ್ದ ಜಾಗ್ವಾರ್ ಹಾಗೂ ರೇಂಜ್ ರೋವರ್ ಸೇರಿದಂತೆ ಬರೋಬ್ಬರಿ 25 ಐಷಾರಾಮಿ ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ 5 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ಪಕ್ಕದಲ್ಲಿದ್ದ ಯುಪಿವಿಸಿ ಕಿಟಕಿ ತಯಾರಿಕಾ ಫ್ಯಾಕ್ಟರಿ ಹಾಗೂ ಪಕ್ಕದ ಶೆಡ್ನಲ್ಲಿದ್ದ 8 ಆಟೋ ರಿಕ್ಷಾಗಳಿಗೂ ಬೆಂಕಿ ವ್ಯಾಪಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೂದಿಯಾಗಿವೆ. ಸಮಯಕ್ಕೆ ಸರಿಯಾಗಿ ಎಚ್ಚೆತ್ತ ಗ್ಯಾರೇಜ್ ಸಿಬ್ಬಂದಿ ಕಾರುಗಳ ಮಾಲೀಕರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಪರತೆಯಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ಹರಡುವುದು ತಪ್ಪಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
