‘KAAMS’ ಅಟೆಂಡೆನ್ಸ್ ಆ್ಯಪ್ ನಿಯಮದ ಗಡುವು ಶಿಕ್ಷಕರ ಜೀವಕ್ಕೆ ಕಂಟಕವಾಗುತ್ತಿದೆಯಾ? ಎಂಬ ಪ್ರಶ್ನೆ ಈಗ ಮೂಡ ತೊಡಗಿದೆ. ಆ್ಯಪ್‌ನಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾತಿ ನಮೂದಿಸುವ ಧಾವಂತದಲ್ಲಿ, ಬೆಳಗಾವಿಯಲ್ಲಿ ಶಾಲೆಗೆ ತೆರಳುತ್ತಿದ್ದ ವರಾಳೆ ಟೀಚರ್ ಭೀಕರ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿಯ ನೆಹರೂ ನಗರದ ಡಿ-ಮಾರ್ಟ್ ಸಮೀಪ ಈ ದುರ್ಘಟನೆ ಸಂಭವಿಸಿದೆ. ಟಿಳಕವಾಡಿಯ 9ನೇ ಸಂಖ್ಯೆಯ ಸರ್ಕಾರಿ ಶಾಲೆಯ ಶಿಕ್ಷಕಿ ರಾಜಶ್ರೀ ನಾರಾಯಣ್ ವರಾಳೆ ಅವರು ಪ್ರತಿದಿನದಂತೆ ಶಾಲೆಗೆ ತೆರಳುತ್ತಿದ್ದರು. ಇತ್ತೀಚೆಗೆ ಜಾರಿಗೆ ಬಂದಿರುವ KAAMS (ಕರ್ತವ್ಯ) ಆ್ಯಪ್‌ನಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾತಿ ನಮೂದಿಸಬೇಕಾದ ಒತ್ತಡದಲ್ಲಿದ್ದ ಅವರು ಶಾಲೆಗೆ ತಲುಪುವ ಧಾವಂತದಲ್ಲಿದ್ದರು. ಈ ವೇಳೆ ರಸ್ತೆಯಲ್ಲಿದ್ದ ತಗ್ಗನ್ನು ತಪ್ಪಿಸಲು ಯತ್ನಿಸಿದಾಗ, ಹಿಂದಿನಿಂದ ಬಂದ ವೇಗವಾದ ನಾಲ್ಕು ಚಕ್ರದ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶಿಕ್ಷಕಿ ರಾಜಶ್ರೀ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಅಪಘಾತ ಎಸಗಿದ ವಾಹನದ ಚಾಲಕ ಮಾನವೀಯತೆಯೂ ಇಲ್ಲದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ಶಿಕ್ಷಕರ ಸಮುದಾಯ, “ನಾವು ಪ್ರತಿದಿನ ನಿಯಮಿತವಾಗಿ ಶಾಲೆಗೆ ತೆರಳುತ್ತೇವೆ, ಆದರೆ ಈ ಆ್ಯಪ್ ಆಧಾರಿತ ಕಟ್ಟುನಿಟ್ಟಿನ ಸಮಯದ ಒತ್ತಡದಿಂದಾಗಿ ರಸ್ತೆಯಲ್ಲಿ ಪ್ರಾಣಭಯದಿಂದ ಚಲಿಸಬೇಕಾದ ಪರಿಸ್ಥಿತಿ ಬಂದಿದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಶಿಕ್ಷಕರ ಮೇಲಿನ ಈ ಮಾನಸಿಕ ಹಾಗೂ ಸಮಯದ ಒತ್ತಡವನ್ನು ಕೂಡಲೇ ಕಡಿಮೆ ಮಾಡಲು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಗಮನಹರಿಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ. ಬೈಟ್
