Davanagere

ಮನೆ ಮುಂದಿದ್ದ ಸಾಕು ನಾಯಿಯನ್ನೇ ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

Share

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಚಿರತೆಯಟ್ಟಹಾಸ ಮುಂದುವರಿದಿದ್ದು, ಸಾಗರಪೇಟೆಯಲ್ಲಿ ಮನೆ ಮುಂದೆ ಮಲಗಿದ್ದ ಸಾಕು ನಾಯಿಯನ್ನೇ ಚಿರತೆಯೊಂದು ಹೊತ್ತೊಯ್ದಿದೆ. ಈ ಭಯಾನಕ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಬಳಿಯ ಸಾಗರಪೇಟೆಯ ಮುಖ್ಯ ರಸ್ತೆಯಲ್ಲಿರುವ ರೈತ ಕೊಟ್ಟೂರ ಹಾಲೇಶ್ ಎಂಬುವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಸಮೀಪದಲ್ಲೇ ಗುಡ್ಡಗಾಡು ಪ್ರದೇಶವಿರುವುದರಿಂದ ರಾತ್ರಿ ವೇಳೆ ಆಹಾರ ಅರಸಿ ಬಂದ ಚಿರತೆ, ಕಾಂಪೌಂಡ್ ಹಾರಿ ಬಂದು ಬಾಗಿಲ ಬಳಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಇದೇ ಪ್ರದೇಶದಲ್ಲಿ ಚಿರತೆಯೊಂದನ್ನು ಸೆರೆ ಹಿಡಿದಿದ್ದರು. ಆದರೆ, ಈಗ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಸಾಗರಪೇಟೆ ಗ್ರಾಮಸ್ಥರನ್ನು ಭೀತಿಗೊಳಿಸಿದ್ದು, ತಕ್ಷಣವೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಬೀಳಿಸಬೇಕೆಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Tags:

error: Content is protected !!