Belagavi

ಬೆಳಗಾವಿಯಲ್ಲಿ ‘ಕರ್ನಾಟಕ ರಕ್ಷಣಾ ಟೈಗರ್ಸ್’ ಸಂಘಟನೆ ಉದ್ಘಾಟನೆ: ಗಡಿ ವಿಚಾರದಲ್ಲಿ ಧ್ವನಿ ಎತ್ತಿದ ರಾಜ್ಯಾಧ್ಯಕ್ಷ ಹರಿ ಆರ್‌!

Share

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ಮಂಡಿಸುವಲ್ಲಿ ವಿಳಂಬ ನೀತಿ ಅನುಸರಿಸುವ ಎಲ್ಲ ಸರ್ಕಾರಗಳಿಗೆ ಬಿಸಿ ಮುಟ್ಟಿಸಿ ತಕ್ಕ ಪಾಠ ಕಲಿಸಲಾಗುವುದೆಂದು ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘದ ರಾಜ್ಯಾಧ್ಯಕ್ಷ ಹರಿ. ಆರ್ ಹೇಳಿದರು.

ಬೆಳಗಾವಿಯ ಶಬರಿ ಹೋಟೆಲ್ ಎದುರಿನಿಂದ ಆರಂಭಗೊಂಡ ಭವ್ಯ ಜಾನಪದ ಮೆರವಣಿಗೆಯು ನೆಹರೂ ನಗರದ ಕನ್ನಡ ಭವನದವರೆಗೆ ಸಾಗಿತು. ಉತ್ತರ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲಾತಂಡಗಳ ಕಲಾ ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿತು.

ಕಾರ್ಯಕ್ರಮಕ್ಕೂ ಮುನ್ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭವ್ಯ ಮೆರವಣಿಗೆ ನಡೆಸಿ, ಚನ್ನಮ್ಮನವರ ಅಶ್ವಾರೂಢ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮೆರವಣಿಗೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ಹರಿ ಆರ್‌., “ಕಳೆದ ೨೬ ವರ್ಷಗಳಿಂದ ನಾವು ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಗಡಿ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಎಂಇಎಸ್, ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ಗಡಿ ಕುರಿತ ಹೇಳಿಕೆಗಳು ಬರೀ ಬೊಗಳೆ ಮಾತುಗಳಾಗಿದ್ದು, ಸುಪ್ರಿಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸವಿದೆ” ಎಂದರು. ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಬಳಕೆಯ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಕನ್ನಡ ವಿಚಾರದಲ್ಲಿ ದಪ್ಪ ಚರ್ಮದ ನಡೆ ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದರಲ್ಲದೆ, ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ ಬಿಸಿ ಮುಟ್ಟಿಸುವ ಕೆಲಸವನ್ನು ನಮ್ಮ ಸಂಘಟನೆ ಮಾಡಲಿದೆ ಎಂದು ಎಚ್ಚರಿಸಿದರು.

ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ಟೈಗರ್ಸ್ ರಾಜ್ಯಾಧ್ಯಕ್ಷ ಹರೀಶ್ (ಹರಿ ಆರ್‌.) ಅವರ ನೇತೃತ್ವದಲ್ಲಿ ಸಂಘಟನೆಯ ನೂತನ ಉದ್ಘಾಟನೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಪ್ರಮುಖ ಸಭೆ ಜರುಗಿತು. ಈ ಕಾರ್ಯಕ್ರಮದ ಉಸ್ತುವಾರಿಯನ್ನು ಸಂಘಟನೆಯ ಉತ್ತರ ಕರ್ನಾಟಕ ಉಸ್ತುವಾರಿ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷ ಬಾಳಪ್ಪಾ ಬಿ. ಗುಡಗೇನಟ್ಟಿ ವಹಿಸಿಕೊಂಡಿದ್ದರು.

Tags:

error: Content is protected !!