ಮಾಧ್ಯಮ ಹಾಗೂ ಪೊಲೀಸರೆಂದು ಹೇಳಿಕೊಂಡು ಜನರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಜಾಲವೊಂದನ್ನು ಹುಕ್ಕೇರಿ ಪೊಲೀಸರು ಭೇದಿಸಿದ್ದಾರೆ. ಗಾಂಜಾ ಮಾರಾಟದ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ಬೆದರಿಸಿ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟು, ಹಣ ಸುಲಿಗೆ ಮಾಡಿದ್ದ ನಾಲ್ವರು ಯೂಟ್ಯೂಬರ್ಗಳು ಈಗ ಕಂಬಿ ಎಣಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಸೋಗಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಕಲ್ಲಪ್ಪ ಮಾಳಾಜ, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚೌಹಾಣ್ ಮತ್ತು ಡೇವಿಡ್ ತಂಗೇರಾಳ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಟಭಾಗಿಯ ಮಹಿಬೂಬ್ ಎಂಬುವವರಿಗೆ ಬಲವಂತವಾಗಿ ಗಾಂಜಾ ನೀಡಿ, ಬಳಿಕ ನಾವು ಪೊಲೀಸರು ಎಂದು ಬೆದರಿಸಿ ವೀಡಿಯೋ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ನಂತರ ₹2 ರಿಂದ ₹3 ಲಕ್ಷಕ್ಕೆ ಬೇಡಿಕೆಯಿಟ್ಟು, ಅಂತಿಮವಾಗಿ ₹60,000 ಸುಲಿಗೆ ಮಾಡಿ ವೀಡಿಯೋವನ್ನು ‘ಜಿ.ಡಿ. ಟಿವಿ’ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಎಸ್.ಆರ್. ಗಣಾಚಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಮಾರುತಿ ಎರ್ಟಿಗಾ ಕಾರ್, ಬೈಕ್, 2 ಮೊಬೈಲ್ ಹಾಗೂ ₹34,000 ನಗದನ್ನು ವಶಪಡಿಸಿಕೊಳ್ಳಲಾಗಿದೆ.
