ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅಂತ್ಯಕ್ರಿಯೆಗೆ ಯಾರೂ ಬಾರದ ಹಿನ್ನೆಲೆಯಲ್ಲಿ ಯುವಕರ ತಂಡವೊಂದು ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಘಟನೆ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಶುಕ್ರವಾರ ನಡೆದಿದೆ.

ಟಿಳಕವಾಡಿಯ ನಿವಾಸಿಯಾಗಿದ್ದ ಶಕುಂತಲಾ ರಾಮಚಂದ್ರ ಗಡಕರಿ (70) ಅವರು ಕಳೆದ ಕೆಲವು ವರ್ಷಗಳಿಂದ ಪತಿಯ ನಿಧನದ ಬಳಿಕ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾದರು.
ಮಹಿಳೆಯ ನಿಧನದ ಬಳಿಕ ಅವರ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬದವರು ಯಾರೂ ಮುಂದೆ ಬಂದಿರಲಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ, ಸಮಾಜಸೇವಕ ಗಂಗಾಧರ ಪಾಟೀಲ ಹಾಗೂ ಮತ್ತಿತರರು ಅಂತ್ಯಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡರು. ವಿಧಿವಿಧಾನಗಳ ಮೂಲಕ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ ಶಂಕರ ಪಾಟೀಲ, ಗಂಗಾಧರ ಪಾಟೀಲ ಮತ್ತು ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹೀಗೆ ಅನೇಕ ಅನಾಥ ಶವಗಳಿಗೆ ಇವರು ಅಂತ್ಯಕ್ರಿಯೆ ನೆರವೇರಿಸಿದ್ದು, ಹಲವು ಸಾಮಾಜಿಕ ಸೇವೆಗಳಲ್ಲಿ ತೊಡಗಿದ್ದಾರೆ.
