ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಅನುದಾನದಡಿ ನಡೆಯುತ್ತಿರುವ ಈ ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಕಟ್ಟಡವನ್ನು ಅತ್ಯುನ್ನತ ಗುಣಮಟ್ಟದಲ್ಲಿ ನಿರ್ಮಿಸುವಂತೆ ಜನಪ್ರತಿನಿಧಿಗಳು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.


ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಲೋಕೋಪಯೋಗಿ ಇಲಾಖೆಯ ₹36 ಲಕ್ಷ ಅನುದಾನದಲ್ಲಿ ಮಂಜೂರಾದ 2 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ತಾ.ಪಂ. ಸದಸ್ಯ ಯಲ್ಲಪ್ಪ ಕೋಳೇಕರ ಶುಕ್ರವಾರ ಭೂಮಿಪೂಜೆ ನೆರವೇರಿಸಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ ಮಾತನಾಡಿ, ಸಚಿವರ ಕೊಡುಗೆಯಿಂದ ಗ್ರಾಮದಲ್ಲಿ ಶೈಕ್ಷಣಿಕ ಸುಧಾರಣೆಯಾಗುತ್ತಿದೆ ಎಂದರೆ, ಹೆಚ್ಚುತ್ತಿರುವ ಮಕ್ಕಳ ಸಂಖ್ಯೆಗೆ ತಕ್ಷಣ ಸ್ಪಂದಿಸಿ ಕೊಠಡಿ ಮಂಜೂರು ಮಾಡಿಸಿದ ಸಚಿವರಿಗೆ ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣ ಕುರುಬರ ಧನ್ಯವಾದ ಸಲ್ಲಿಸಿದರು.
ಇದೇ ವೇಳೆ ಚೆನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಡಿ. ಪಾಟೀಲ ಮಾತನಾಡಿ, ಗಡಿಭಾಗದ ಶೈಕ್ಷಣಿಕ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಬಸವರಾಜ ಗಾಣಿಗೇರ, ರೇಣುಕಾ ಕೋಳಿ, ಜಮುನಾ ಕೋಳಿ, ಎಸ್.ಎ. ಅಂಕಲಗಿ, ಗುತ್ತಿಗೆದಾರರಾದ ಎಸ್.ಎಮ್. ಪಾಟೀಲ್, ಭರಮಾ ಬುಡಕೆ, ದಿನೇಶ್ ಶೆಂಡಗೆ ಹಾಗೂ ಲೋಕೋಪಯೋಗಿ ಇಲಾಖೆಯ ಪವನ ಗಸ್ತಿ, ಅಶೋಕ ಖೋತ, ಗಿರೀಶ ಜಗಜಂಪಿ, ಶಿವಾನಂದ ತಲ್ಲೂರ ಸೇರಿದಂತೆ ಗ್ರಾಮಸ್ಥರು, ಎಸ್‌ಡಿಎಂಸಿ ಬಳಗ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
