ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ “ಫ್ಯಾಕ್ಟರ್ಸ್ ಇನ್ಫ್ಲುಯೆನ್ಸಿಂಗ್ ಮಿಲ್ ಎಕ್ಸ್ಟ್ರಾಕ್ಷನ್ ಆಂಡ್ ಪರ್ಫಾರ್ಮೆನ್ಸ್” ಕುರಿತು ಒಂದು ದಿನದ ಮಹತ್ವದ ವಿಚಾರ ಸಂಕಿರಣ ಯಶಸ್ವಿಯಾಗಿ ಜರುಗಿತು.


ಸಂಸ್ಥೆಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಈ ವಿಚಾರಸಂಕಿರಣದ ಮುಖ್ಯ ಅತಿಥಿಯಾಗಿ ಪುಣೆಯ ವಸಂತದಾದಾ ಸಕ್ಕರೆ ಸಂಸ್ಥೆಯ ನಿವೃತ್ತ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಸೂರ್ಯನಾರಾಯಣ ಶಾಸ್ತ್ರಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ರಾಜಗೋಪಾಲ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂತ್ರಿಕ ಸಲಹೆಗಾರರಾದ ಸಿ.ಬಿ. ಪಾಟೀಲ ಅವರು ವಿಚಾರ ಸಂಕಿರಣದ ಮಹತ್ವದ ಕುರಿತು ಬೆಳಕು ಚೆಲ್ಲಿದರೆ, ಸೂರ್ಯನಾರಾಯಣ ಶಾಸ್ತ್ರಿ ಅವರು ಮಿಲ್ಗಳ ನಿರ್ವಹಣೆ, ರೋಲರ್ಗಳ ಸ್ಥಿತಿ, ಮಿಲ್ ಸೆಟ್ಟಿಂಗ್, ಹೈಡ್ರಾಲಿಕ್ ಒತ್ತಡ ಹಾಗೂ ಇಂಬಿಬಿಷನ್ ನೀರಿನ ಪ್ರಮಾಣದ ಕುರಿತು ತಾಂತ್ರಿಕ ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಆಗಮಿಸಿದ್ದ 120ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿಯವರು ಸಕ್ರಿಯವಾಗಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು. ಮದ್ಯಸಾರ ತಜ್ಞರಾದ ರಾಹುಲ ಪಾಟೀಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಸಕ್ಕರೆ ತಜ್ಞರಾದ ಶಂಕರ ಧರ್ಮಟ್ಟಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
