ಬೆಳಗಾವಿ ನಗರದ ಕೋಟೆ ಕೆರೆ ಆವರಣದಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿಗಾಗಿ ಎಸ್‌ಡಿಆರ್‌ಎಫ್ ವತಿಯಿಂದ ವಿಶೇಷ ವಿಪತ್ತು ನಿರ್ವಹಣೆ ಕಾರ್ಯಾಗಾರ ಆಯೋಜಿಸಲಾಗಿತ್ತು. ಅನಾಹುತಗಳ ಸಮಯದಲ್ಲಾಗುವ ಅಪಾಯಗಳನ್ನು ಎದುರಿಸುವ ನಿಟ್ಟಿನಲ್ಲಿ ಸಿಬ್ಬಂದಿಗೆ ಬೋಟ್ ಚಲಾವಣೆ ಸೇರಿದಂತೆ ಹಲವು ಮುಖ್ಯ ವಿಷಯಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.


ಬೆಳಗಾವಿ ನಗರದ ಐತಿಹಾಸಿಕ ಕೋಟೆ ಕೆರೆ ಪ್ರದೇಶದಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳಿಗಾಗಿ ಒಂದು ದಿನದ ಪ್ರಾಯೋಗಿಕ ವಿಪತ್ತು ನಿರ್ವಹಣಾ ವಿಶೇಷ ತರಬೇತಿ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ರಾಜ್ಯ ವಿಪತ್ತು ಶಮನ ಪಡೆ ಸಿಬ್ಬಂದಿಗಳು ಈ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದು, ಜಲಾವೃತ ಅಥವಾ ತುರ್ತು ಸಂದರ್ಭಗಳಲ್ಲಿ ಹೇಗೆ ರಕ್ಷಣಾ ಕಾರ್ಯಾಚರಣೆ ನಡೆಸಬೇಕು ಎಂಬುದರ ಕುರಿತು ವಿಸ್ತೃತ ಮಾಹಿತಿ ನೀಡಿದರು. ಮುಖ್ಯವಾಗಿ ಬೋಟ್ ಚಲಾವಣೆ, ಬೋಟ್‌ಗಳ ಸಮರ್ಪಕ ನಿರ್ವಹಣೆ ಮತ್ತು ರಕ್ಷಣಾ ಉಪಕರಣಗಳ ಬಳಕೆ ಕುರಿತು ಸಿವಿಲ್ ಡಿಫೆನ್ಸ್ ಸಿಬ್ಬಂದಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಯಿತು.

ಈ ತರಬೇತಿ ಶಿಬಿರದಲ್ಲಿ ಎಸ್‌ಡಿಆರ್‌ಎಫ್ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾನಂದ ಗುಣದಾಳ ಹಾಗೂ ಅವರ ಸಿಬ್ಬಂದಿ ವರ್ಗವು ಪಾಲ್ಗೊಂಡು ತರಬೇತಿ ನೀಡಿದರು. ನಿವೃತ್ತ ಕಮಾಂಡಂಟ್ ರಾಘವೇಂದ್ರ ಪೇಟಕರ ಅವರು ಈ ವೇಳೆ ಸಿಬ್ಬಂದಿಗಳಿಗೆ ವಿಪತ್ತಿನ ಸಮಯದಲ್ಲಿ ನಿರ್ವಹಿಸಬೇಕಾದ ಕರ್ತವ್ಯದ ಕುರಿತು ಮಾಹಿತಿಯನ್ನು ನೀಡಿದರು.

ಇದರೊಂದಿಗೆ ಗೃಹ ರಕ್ಷಕದಳದ ಕಮಾಂಡಂಟ್ ಚನ್ನಪ್ಪ ಅಥಣಿ, ಸಹಾಯಕ ಕಮಾಂಡಂಟ್ ಬಾಬಾಸಾಹೇಬ್ ಕಾಂಬಳೆ, ನಿವೃತ್ತ ಕಮಾಂಡಂಟ್ ರಾಘವೇಂದ್ರ ಪೇಟಕರ, ನಿವೃತ್ತ ಸಹಾಯಕ ಕಮಾಂಡಂಟ್ ಸಿ.ಬಿ. ಭಡಕಲ್ ಹಾಗೂ ಆನಂದ ನಾವಲಗಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಸಿಬ್ಬಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

